ಈಡೇರದ ಕನಸಗಳು
ಈಡೇರದ ಕನಸಗಳು
ಈಡೇರದ ಕನಸುಗಳಿಗೆ ಶಪಿಸಲೋ
ನನಸು ಮಾಡದವನನ್ನು ನೆನೆದು ದುಃಖಿಸಲೋ
ಸಾವಿರ ಕನಸುಗಳನ್ನು ನನ್ನೊಳ ಬಿತ್ತಿ
ಸಂಬಂಧವಿಲ್ಲದಂತೆ ಹೊರಟು ಬಿಟ್ಟೇಯಲ್ಲೋ.
ಬೆನ್ನಟಿರುವೆ ನಿನ್ನನ್ನು ಈಡೇರದ ಕನಸುಗಳ ಜೊತೆಯಲಿ
ದಾರಿ ಸವೆಸಿದಷ್ಟು ಓಡುತ್ತಿರುವೆ ನೀನು ದೂರದಲಿ
ಹಿಂದಿರುಗಿ ನೋಡು ಒಂದು ಬಾರಿ ನನ್ನನ್ನು
ನನಸು ಮಾಡುವ ಮನಸ್ಸಾದರೂ ಬರಬಹುದು ನಿನ್ನಲ್ಲಿ.
ಶಬರಿಯಂತೆ ಕಾಯುತ್ತಿರುವೆ ನಿನಗಾಗಿ
ಮರಳಿ ಬಂದು ಬಿಡಬಾರದೆ ನನ್ನ ಪ್ರೀತಿಗಾಗಿ
ಮುಡಿಪಾಗಿ ಇಡುವೇ ಜೀವ ಮತ್ತು ಜೀವನವನ್ನು
ಕೊನೆಯವರೆಗೂ ನಿನ್ನ ಅನುರಾಗಕ್ಕಾಗಿ.
ನೂರಾರು ಕಥೆ ಹೇಳುತ್ತಿದೆ ಲೋಕ ನಿನ್ನದು
ಬೇರೆಯತ್ತ ಹಂಬಲವಿದೆ ಅವನದು
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು
ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು.

