ಕೃಷ್ಣ
ಕೃಷ್ಣ


ಗಲ್ಲಕ್ಕೆ ಮೊಣಕೈ ಕೊಟ್ಟು ಕೂತುಬಿಡಲೇ ನಿನ್ನ ಮುಂದೆ
ಸಾಗಿಹೋಗಲಿ ದಿನಗಳು ತಿಂಗಳುಗಳು ಹಿಂದೆ ಹಿಂದೆ
ನಿನ್ನ ಮಾತೇ ಜೇನಿನಷ್ಟು ಮಧುರ
ಸಿಹಿ ಉಂಡಷ್ಟು ಮತ್ತೆ ಮತ್ತೆ ಕೇಳುವುದು ಅಧರ
ತುಂಟ ಕಣ್ಣು ಅಲುಗಾಡದು ಅತ್ತಿತ್ತ ಎತ್ತಲೂ
ನೆಟ್ಟಂತೆ ನಿಂತು ಬಿಡುವುದು ನಿನ್ನ ಸುತ್ತಲೂ
ಅದೇನು ಹಾವ ಭಾವ ಭಂಗಿ
ಮನಸ್ಸು ಆಗಿ ಬಿಡುವುದೊ ನಲ್ಲ ಜೀರಂಗಿ
ಅನುಕ್ಷಣವೂ ಬಿಟ್ಟಿರಲಾರದ ವೇದನೆ
ದೂರಾಗಿ ಸರಿಯದಿರು ಎಂಬುದೇ ನಿವೇದನೆ
ಇರುವುದೆಷ್ಟೊ ಜೀವನ ನಾನೆಂತು ಅರಿಯೆ
ಜೀವ ವಿರುವವರೆಗೂ ನಾನಂತು ಮರೆಯೆ
ಇದ್ದು ಬಿಡು ಹೃದಯಾಂತರಂಗದಲ್ಲಿ ಶಾಶ್ವತವಾಗಿ
ಕನಸಿಗೂ ಮನಸಿಗೂ ತಂಪು ಕೊಡುವ ಸುಮದಂತಾಗಿ
ಅಡ್ಡ ತಡೆಗಳು ಬಿರುಸಾಗಿ ಬಿರುಗಾಳಿಯಂತಾಗಲಿ
ನಮ್ಮಿಬ್ಬರ ಒಲವಂತೂ ತೇಯ್ದ ಗಂಧದಂತಾಗಲಿ