ಬಹುಪುಟದ ಹೊತ್ತಿಗೆ
ಬಹುಪುಟದ ಹೊತ್ತಿಗೆ
ಓ ನನ್ನ ಪ್ರಿಯತಮೆ,
ನನ್ನೊಲವನು ಕಣ್ಣ ಲೇಖನಿ ಮಾಡಿ,
ನಿನ್ನೊಲವಿನ ಕಣ್ಣ ಹಾಳೆಯ ಮೇಲೆ
ಬರೆಬರೆದು ಹಾಕಿದ ಪ್ರೇಮಪತ್ರಕೆ ಲೆಕ್ಕವುಂಟೆ?
ಹಾಗೆಯೇ ಓ ನನ್ನ ಒಲವೇ
ನೀ ಬರೆದ ಪ್ರೇಮಪತ್ರವೂ ಕಣ್ಣಿನಲೇ
ಅದು ನೀ ಬರೆದೆ ನನ ಕಣ್ಣ ಹಾಳೆಯ ಮೇಲೆ
ಅದರಲೇ ಕೊರೆದ ಚಿತ್ರಗಲುಂಟು.
ಲೆಕ್ಕವಿಲ್ಲದ ಆ ಪ್ರೇಮಪತ್ರಗಳ
ಆಕ್ಕರೆಯ ಅಕ್ಷರಮಾಲೆ, ಚಿತ್ರಗಳ ಸರಮಾಲೆ
ಎಲ್ಲವೂ ಅಚ್ಚಾಗಿದೆ ಪ್ರಿಯೆ
ಈ ನನ್ನ ಹೃದಯದಂಗಳದಲಿ.
ನಿನ ಹೃದಯದಲೂ ಇರಬೇಕು ಹಾಗೆಯೇ
ಅಚ್ಚಾಗಿಹ ಮುಚ್ಚಟೆಯ ಅಚ್ಚಚ್ಚಗಳು
ಬಿಚ್ಚಿ ಇಡಲಾದೀತೆ ಆ ನನ್ನ ನಿನ್ನ
ಹೃದಯದೊಳಗಿನ ಒಲವ ಪತ್ರಗಳ.
ಇವರೇಕೆ ಕೇಳಿಹರು ಪ್ರೇಮಪತ್ರವ ಬೆಸಗಲು
ಅದೆಲ್ಲ ನಮ್ಮೊಳಗಿನ ಸವಿಮಾತು ಕಿವಿಮಾತು
ಹೃದಯ ಹೃದಯದೊಳು ಬರೆದ ಪ್ರೇಮಪತ್ರ
ಮನಮನದೊಳಗೆ ಚಿತ್ರಸಿದ ರಂಗವಲ್ಲಿ.
ಅದು ನನಗಷ್ಟೇ ನಿನಗಷ್ಟೇ ಗೊತ್ತಿರುವ ಮಾತು
ನಿಮಗೆಲ್ಲ ತಿಳಿದಿರಲಿ ಈ ಪ್ರೇಮಪತ್ರಗಳೆಲ್ಲ
ನಮ್ಮಿಬ್ಬರದೇ ನಮ್ಮಿಬ್ಬರಿಗೇ ಎಂದು
ನಮ್ಮೊಳಗೇ ತೆರೆದಿಟ್ಟ ಬಹುಪುಟದ ಹೊತ್ತಿಗೆ.