ಪುರಾವೆ ಎಲ್ಲಿಂದ ತರಲಿ ?
ಪುರಾವೆ ಎಲ್ಲಿಂದ ತರಲಿ ?
ಇಂದು ,
ನಾನು ಚುಂಬಿಸಿದ
ನಿನ್ನ ಸುಂದರ ಕಣ್ಣುಗಳಲ್ಲಿ,
ನನ್ನನ್ನು ನಿಟ್ಟಿಸಲು ಆಗದ
ಅಗಾದ ನೋವಿನ ಗುರುತಿದೆ.
ನನ್ನ ಹೆಸರಿದೆ ಎಂದುಕೊಂಡ
ನಿನ್ನ ಹಣೆಯ ಮೇಲೆ,
ಇಂದು ಮತ್ಯಾರದೋ ಹೆಸರಿನ
ಕುಂಕುಮದ ಬೊಟ್ಟಿದೆ !
ನಿನ್ನ ಹಣೆಯ ಮೇಲೆ ಇದ್ದ
ನನ್ನ ಹೆಸರಿಗೆ
ಯಾವ ಪುರಾವೆಯಾಗಲೀ,
ಗುರುತಾಗಲೀ ಇಲ್ಲ!
ಅಂದು
ನಾವು ಕೈಹಿಡಿದು ನಡೆವಾಗ
ಇಲ್ಲದ ಹಸಿರು ಬಳೆಗಳ ಕಲರವ
ಇಂದು ಮನದ ಮೌನ ಕಲಕುತ್ತಿವೆ.
ಅಂದು ನಿನ್ನ ಮೃದುವಾದ
ಪಾದಗಳ ಬೆರಳಲ್ಲಿ
ಇಲ್ಲದ ಕಾಲುಂಗರ
ಇಂದು ಹೊಳೆವ ಕಾಲುಂಗರಗಳ ವೈಭವ !
ಈ ಹಿಂದಿನಂತೆ ನಿನ್ನನ್ನು
ನೋಡಲು ಪ್ರಯತ್ನಿಸಿದಾಗಲೆಲ್ಲಾ
ನಿನ್ನ ಕೊರಳಲ್ಲಿರುವ
ಮಾಂಗಲ್ಯವೇ ಅಡ್ಡಬರುತ್ತದೆ
ಮಾತುಗಳೇ ಮರೆತುಹೋಗುತ್ತವೆ !
ಈಗ ನಿನ್ನ ಮುಖದಲ್ಲಿ
ಎಷ್ಟೊಂದು ಬದಲಾವಣೆಯೆಂದರೆ
ನಾವು ಪರಿಚಯವೇ ಇಲ್ಲವೆಂಬ ಭಾವ !
ಪುರಾವೆ ಎಲ್ಲಿಂದ ತರಲಿ ?