ಪ್ರೇಮದಮಲು..
ಪ್ರೇಮದಮಲು..
ಮನಸಿನೊಳು ಕಾಡಿದವ
ಕನಸಿನೊಳು ಜಾರಿದನವ
ಭುಗಿಲೆಬ್ಬಿಸಿ ಹಲವು ಭಾವ
ನೋಟದಲೇ ತಾಕಿ ಅವಯವ
ಚದುರಂಗದಾಟದಿ
ಅಧರಂಗಳ ಸವಿದು
ಮನದಂಗಳ ಬನದಿ
ಮನಸಾ ವಿಹರಿಸುತ
ಕರಪಿಡಿದು ಅಲೆಯೇ...
ನೂಪುರಂಗಳ ನಾದಕೆ
ಸುಳಿವ ಮುಂಗುರುಳಿನಾಟಕೆ
ನುಲಿವ ಕಟಿಬದ್ದತೆಯ ಲಯಕೆ
ಸೋಲುವ ನಿಲುವೇ ಮನಕೆ...
ನೀ ಬಂದರೆ ಹಬ್ಬ ಸುಗ್ಗಿಗಳೆಲ್ಲ..
ಮಂದನಗಿಯ ತಂದರೆ ಹಿಗ್ಗು..
ಹಿಂಗಿಸುವಾಸೆ ಬಯಕೆ ಮೊಗ್ಗು..
ಸೆರಗಿನಂಚಿನ ಬಣ್ಣ ಕರಗುವಷ್ಟು...
ತುಸುವೇ ಪಸೆಗೆ ಬೆಸೆದ ಬಗೆ
ಹಸೀ ಕನಸಿಗೆ ಆಯಿತು ಸಸೀ
ಕಸೀಗೊಳ್ಳಲು ತಾಮಸವೇಕೆ?
ಶೋಡಷಿ ನಾನೆಂದು ಹಿಂಜರಿಕೆಯೇಕೆ?
ಪರಮೋಚ್ಛ ಪ್ರೇಮದಮಲು..
ಪರಮಾತ್ಮನಿಗೊಲವು..
ಪರಬ್ರಹ್ಮನಿಗೂ ಉಂಟು ನಂಟು
ಸೃಷ್ಟಿಲಯದಿ ಅನುನಯದ ಪಾತ್ರ.
ಅಂತೆಯೇ ಸಂತೆಯಲಿ ಬಂದೆವು
ನಿಂತು ಕನಸಲಿ ತೇಲಿದೆವು
ಸಂಸಾರನೌಕೆಯಲಿ ನಲಿದೆವು
ಒಲಿದು ಉಲಿದು ಬಳಲಿದೆವು...
.