ಓ ಪ್ರೀಯಾ..!!!
ಓ ಪ್ರೀಯಾ..!!!
ಮುಂಜಾವಿನ ತಂಗಾಳಿಗೆ ಮೈಯೊಡ್ಡಿ
ಓಡುವಾಗಲೆಲ್ಲಾ, ನಿನ್ನದೇ ನೆನಪು.
ಸಂಜೆಗೆಂಪಲಿ ಸೋತು ಕುಳಿತಾಗಲೂ
ಕವಿತೆಯೊಳಗೆ ಮೆಲ್ಲನುಸುಳುವೆ ನೀ.
ಇರುಳಕನಸಿಗೂ ಹೊಂಚು ಹಾಕುತ್ತಾ,
ಸರಳರೇಖೆಯಂತವಳ ಬರಸೆಳೆಯಲೇಕೆ?
ಬಿಳಿಹಾಳೆತುಂಬಾ ನಿನ್ನದೇ ಹೆಸರಿನಕ್ಷರ,
ತಾನಾಗೇ ಅರಳುತ್ತಿದ್ದವು ಪದಗಳಾಗಿ.
ಬೆರಳಿಗೊಂದುಂಗುರ , ಮುತ್ತಿನೋಲೆ
ತೊಡಿಸಿ, ಮುದ್ದಿಸಿದಂತೆ ಅನಿಸಿಕೆಯಿತ್ತು,
ಬಿಡಿಸಿದಧರಗಳ ಅಡಿಗಡಿಗೆ ಸವರುವಾಸೆ
ಮತ್ತೊಂದಿತ್ತು, ಅದಕ್ಕೇನೂ ಕೊರತೆಯಿಲ್ಲ
ಏನಿದೆಂತಹ ಅನಿಸಿಕೆಯೆಂದು ಕೊಡವಿ
ಓಟ ಮುನ್ನಡೆಸಿದಾಗಲೇ ಗೊತ್ತಾಯ್ತು,
ಜೊತೆಜೊತೆಯಲಿ ಹೆಜ್ಜೆಹಾಕುವ ಸದ್ದು
ನನ್ನನ್ನೇ ಹಿಂಬಾಲಿಸುತ್ತಿದೆ ಎಂದು...
ನವರಸಗಳು ಗಲ್ಲಕಿಳಿಯುವ ಮುನ್ನ
ಹೂಮನ ಕಂಪಿಸಿ ಸೋಲುವ ಮುನ್ನ
ಓಡುವ ಕಾಲ್ಗಳು ತಾಳತಪ್ಪುವ ಮುನ್ನ
ನಾ ಒಮ್ಮೆ ನಿಂತು ಹಿಂದಿರುಗಿ ನೋಡಲೇ?
ಎನ್ನುವಷ್ಟರಲ್ಲೇ ಸಮಯ ಸರಿದಿತ್ತು,
ಮುಂದೆ ಹೋದವನ ಮುಖಚಹರೆ
ಕಾಣದೇ, ಮನಸು ವಿಲವಿಲನೆ ತುಡಿದಿತ್ತು
ಮುಂಜಾವಿನ ಮಂಜಲ್ಲಿ ಕರಗಿದ್ದನವನು.
( ನೀಲೀ ಚಿಟ್ಟೆಯಾಗಿ ಬಂದವನು ಅವನೇ ಇರಬೇಕೆಂಬ ಅನಿಸಿಕೆಯಲ್ಲಿ ಬರೆದ ಕವನವಿದು..)