ಸಾಂಗತ್ಯಕೆ ದಾಂಪತ್ಯ
ಸಾಂಗತ್ಯಕೆ ದಾಂಪತ್ಯ
ಸಾಂಗತ್ಯಕೆ ನೀನೇ ಬೇಕೆಂಬ
ಹಂಬಲ ಅಂದಿತ್ತು.
ದಾಂಪತ್ಯದ ಕನಸಲ್ಲೇ
ಆಸೆ ಕೊನರಿತ್ತು..
ಗಾಡಿಯಿಂದಿಳಿದ ದಿಬ್ಬಣಕೆ
ಎದೆಯ ಬಡಿತವಿತ್ತು..
ನೀ ಊರಿದ ನೆಲದಲ್ಲಿ ಹೆಜ್ಜೆ
ಗುರುತು ಮೂಡಿಸಿತ್ತು.
ಮೆಲ್ಲುವ ತಾಂಬೂಲದ
ಕೆಂಪಿಗೆ ಅಧರ ಗೆಲ್ಲುವ ಬಯಕೆ..
ತರಗೆಲೆಯ ಚಿಗುರ ಗುಲಾಬಿಗೆ
ಮರಿಕೋಗಿಲೆಯ ಚಿಂತೆ..
ನನಗೇಕೋ ನಿನ್ನ ನೆನಪೊಂದೇ
ನಿತ್ಯ ಬತ್ತಳಿಕೆಯಲ್ಲಿ..
ಪತ್ತೆಯಿಲ್ಲದ ಊರಿನೊಳಗೆ
ಹುಡುಕಾಟದ ತುಮುಲ..
ನಗರಿಗಳಲೆಲ್ಲಾ ದೊಂಬಿ ಸಂತೆ,
ಬುಗುರಿಯಂತಾದ ಮನ
ಬಿಕರಿಯಾಗಿದ್ದವು ಕನಸುಗಳು
ಕಾಲಘಟ್ಟದಲ್ಲಿ ತೂರಿ..
ಸಾಂಗತ್ಯ ಬಿಸಿಲುಕುದುರೆಯೇರಿತ್ತು..
ಮಾಂಗಲ್ಯ ತಂತಾನೇ ತೂಗಾಡಿತ್ತು...