ನವರಸ ನಾಯಕ ಶ್ರೀ ರಾಮ
ನವರಸ ನಾಯಕ ಶ್ರೀ ರಾಮ
ಅಯೋಧ್ಯಾ ಪುರ ನೇತಾರ
ಇಕ್ಷ್ವಾಕು ವಂಶ ಕುಲ ತಿಲಕ
ನಯನ ಮನೋಹರ ರಾಮ
ನವರಸ ನಾಯಕ ಶ್ರೀ ರಾಮ
ಜನಕ ನಂದಿನಿಯ ಕೈ ಪಿಡಿದು
ಶೃಂಗಾರ ರಸ ಸವಿದ ಜಾನಕಿ ರಾಮ
ಶಿವ ಧನುವ ಹಿಡಿದೆಳೆದು ಮುರಿದು
ವೀರ ರಸ ತೋರಿದ ವೀರ ರಾಘವ
ಕಾಕಾ ಸುರನಿಗೆ ಕರುಣೆ ತೋರುತ
ಕರುಣಾ ರಸ ತೋರಿದ ಕರುಣಾಳು
ಸಮುದ್ರ ಸೇತು ನಿರ್ಮಾಣ ದೊಳು
ಅದ್ಭುತ ರಸ ಮೆರೆದ ಗಂಭೀರ ರಾಮ
ಶೂರ್ಪಣಿಕೆಯೊಡನೆ ವಿನೋದವಾಡಿ
ಹಾಸ್ಯ ರಸ ಹರಿಸಿದ ಸೊಗಸುಗಾರ
ಸಮರ ಭೂಮಿಯಲಿ ದನುಜರಿಗೆ
ಭಯಾನಕ ಭೀಭತ್ಸ ರಸದ ಭೀಷಣ
ದುಷ್ಟ ದಶಶಿರನ ಸಂಹಾರದೊಳು
ರೌದ್ರ ರಸವ ಮೆರೆದ ಧೀರ ಗಂಭೀರ
ಮುನಿ ಜನರ ಮನಮಂದಿರದೊಳು
ಶಾಂತ ರಸವ ಹರಿಸಿದ ಆತ್ಮಾರಾಮ
ನವರಸ ನಾಯಕ ಶ್ರೀ ರಾಮ ಚಂದ್ರ
ಇಡುವೆ ನನ್ನ ಮುಡಿಯನು ನಿನ್ನಡಿಗಳಲಿ
ಅನುನಯದಿ ನೀನೆನ್ನ ಅನವರತ ಕಾಪಾಡು
ರಘುಕುಲ ದೀಪ ಶ್ರೀ ಜಾನಕಿ ರಾಮ