ಕಾಗದದ ದೋಣಿ
ಕಾಗದದ ದೋಣಿ
ಮತ್ತೆ ಮಳೆ ಬರುತಿದೆ ಗೆಳೆಯಾ
ಇತ್ತ ಹೃದಯದೂರಿಗೆ ಬರುವೆಯಾ,
ಸುತ್ತ ಜಲತೇರುಗಳೇ ಹೊರಟಿದೆ
ಚಿತ್ತ ನೆನಪಿನೋತ್ಸವವನ್ನೇ ಸೇರಿದೆ!
ನಾನು ತಂದ ಹಾಳೆಗಳ ಹರಿದು
ನೀನು ಮಾಡಿದ್ದೆ ದೋಣಿಗಳ ಅಂದು
ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು
ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು!
ಇಂದು ಕಾಲದೊಂದಿಗೆ ಬೆಳೆದು
ಮುಂದುವರೆದಿದೆ ಬಾಳಿನನುಕ್ಷಣ ಕಳೆದು,
ಎಂದು ಮೊದಲಿನಂತಾಗಬಹುದು
ಮಿಂದು ಮುಂಗಾರಿನ ಸೊಬಗಿಗೆ ತಣಿದು!
ಕಾಗದದ ದೋಣಿ ಪುನಃ ಮಾಡೋಣ
ಹೋಗದ ಜಂಜಾಟವ ಅದರಲ್ಲಿರಿಸೋಣ,
ವೇಗದ ಪಯಣಕೆ ಹುಟ್ಟುಹಾಕೋಣ
ಮಾಗದ ಆಸೆಗಳಿಗೆ ಮೋಕ್ಷವ ನೀಡೋಣ!
