ನಾನು ತಾಯಿ
ನಾನು ತಾಯಿ
ಕಂದಾ....
ನಿನ್ನ ಮೊದಲ ಉಚ್ಛ್ವಾಸ ನಿಶ್ವಾಸ
ಅಳುವಿಂದಲೇ ನೀ ಪ್ರಾರಂಭಿಸಿದೆ,
ಸೃಷ್ಟಿಯ ನಿಯಮದ ಈ ಪರಿಹಾಸ
ತಿಳಿಯದೆ ನಾನಾಗ ತಲ್ಲಣಿಸಿ ಹೋದೆ!
ನಿನಗೇನೋ ಆಗಿರಬಹುದೆಂಬ ಭಯ
ಬಿಟ್ಟಿದ್ದ ನಿಟ್ಟುಸಿರನ್ನು ಮತ್ತೆ ಬಿಗಿಸಿತ್ತು,
ತನು ಮನಗಳು ಹಗುರಾಗಿದ್ದ ಸಮಯ
ಕಾತರದಿಂದ ಎದೆ ಬಡಿತವ ಹೆಚ್ಚಿಸಿತ್ತು!
ಇಂತಹ ಅನುಭವಗಳೆಷ್ಟೋ ಆಗಿ
ನಿನ್ನ ಪ್ರತಿ ಚರ್ಯೆಯ ಅರ್ಥ ನಾ ತಿಳಿದೆ,
ನೀ ಬೆಳೆದಂತೆ ದಿನೇದಿನೇ ನಾ ಪಕ್ವವಾಗಿ
ನಾಡಿಮಿಡಿತ ಹೇಳಬಲ್ಲೆನಿಂದು ಮುಟ್ಟದೆ!
ಆದರೂ ಸುತ್ತಲ ಯಾವ ಮಗು ಅತ್ತರೂ
ಮತ್ತೆ ನಿನ್ನದೇ ಸ್ವರದಲ್ಲಿ ಅತ್ತಂತಾಗುವುದು,
ಕರುಳು ಮಿಡಿವುದು; ಕಣ್ಣು ನೀನಲ್ಲವೆಂದರೂ
ಅದಕ್ಕಲ್ಲವೇ ಹೆಣ್ಣನ್ನು ತಾಯಿ ಎನ್ನುವುದು!
✍️ ಮಂಜುಳಾ ಪ್ರಸಾದ್✍️
