ಮಳೆ ನಿಂತ ಮೇಲೆ
ಮಳೆ ನಿಂತ ಮೇಲೆ
1 min
11
ಮಳೆ ನಿಂತ ಮೇಲೆ
ಮಾಡುವುದು ಏನಿದೆ?
ಕೊಳೆ ತೊಳೆದ ಸೆಲೆ
ಹಗುರಾಗುತ ನಕ್ಕಿದೆ!
ಚಂದವಿದ್ದ ಬದುಕ ನೆಲೆ
ವರ್ಣ ಕಳಚಿ ಬಿದ್ದಿದೆ,
ತೋಯ್ದು ತೊಪ್ಪೆಯಾದ ಒಲೆ
ಮತ್ತೆ ಉರಿಯಲು ಅಳುತಿದೆ!
ಮರೆಯಲಿದ್ದ ಕೋಗಿಲೆ
ಕೂಗಲು ತೊಳಲಾಡಿದೆ,
ಪೀಚುಕಾಯ ಮುಚ್ಚದ ಎಲೆ
ಸೋತು ಕಣ್ಣೀರಿಟ್ಟಿದೆ!
ಬಾಯಾರಿದ ಮಣ್ಣಕಣದಲೆ
ನೀರಿಳಿಯದ ಸ್ಥಿತಿ ಕಂಡಿದೆ,
ರಸ್ತೆಗುಂಟ ಹರಿದ ನಾಲೆ
ಜೀವ ಬಲಿಗಳ ಕೇಳಿದೆ!
ಖಾಲಿ ಬಾನು; ಎತ್ತಲು ತಲೆ
ಚಿತ್ತಕೆ ನಿಲುಕದಾಗಿದೆ,
ಇದಲ್ಲವೇ ಸೃಷ್ಟಿಲೀಲೆ
ಮನುಜನ ಸೊಕ್ಕು ಮುರಿದಿದೆ!

