ಕಾಕತಾಳೀಯ ಕವನ
ಕಾಕತಾಳೀಯ ಕವನ
ಕಣ್ಣಂಚಿನ ಕಿರುನೋಟ ಕಣ್ತುಂಬ ಕಂಡಂತೆ
ಕಾರ್ಮೋಡದ ಕಗ್ಗತ್ತಲು ಕೊಳೆಯ ಕಳೆದಂತೆ
ಕಿಟಕಿಯ ಕಿಂಡಿಯಿಂದ ಕಿನ್ನರನು ಕರೆದಂತೆ
ಕೀರ್ತಿಯ ಕಥೆಯನ್ನು ಕನಸಿನಲ್ಲಿ ಕೊಂಡಂತೆ
ಕುಣಿಕುಣಿದು ಕುಪ್ಪಳಿಸಿ ಕಾವೇರುತಿರಲು
ಕೂದಲೆಳೆಯ ಕಂಟಕವ ಕಾಲ್ತುಳಿಯುತಿರಲು
ಕೃತಜ್ಞತೆಯ ಕರತಾಡನ ಕರತುಂಬಿ ಕರೆಯಲು
ಕೆಚ್ಚೆದೆಯ ಕರುನಾಡ ಕನ್ನಡಿಗನ ಕಡೆಗೋಲು
ಕೇಸರಿಯ ಕೆಂಚನೆ ಕೆಂಬಣ್ಣದ ಕಲಾಕುಸುರಿ
ಕೈಚಳಕದ ಕಲಾವಿದನ ಕಲಾಕೃತಿ ಕಮರಿ
ಕೊಳಲಿನ ಕೋಮಲ ಕಾವ್ಯದ ಕಸ್ತೂರಿ
ಕೋಲ್ಮಿಂಚಿನ ಕಂಪನಕೆ ಕಾನನವು ಕೆದರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ
ಕಂಬನಿಯು ಕರಗಿದೆ ಕಚಗುಳಿ ಕೊನೆಗೊಂಡಿದೆ
ಕ್ರಮೇಣ ಕಾಯಕದಲ್ಲಿ ಕನಸುಗಳು ಕುದುರಿಹುದು
ಕ್ಷಮಯಾಧರಿತ್ರಿ ಕೌಶಲ್ಯಕ್ಕೆ ಕಾಕತಾಳೀಯ ಕವನವಿದು