ಅಜ್ಜಿಯ ಮಜ್ಜನ
ಅಜ್ಜಿಯ ಮಜ್ಜನ
ಮನೆಮನೆಗೆ ತಿರುತಿರುಗಿ
ಮನತುಂಬಿ ಎರೆಯುವಳು
ಧನಕನಕಗಳೆಂದೂ ಬೇಡಳವಳು
ತನು ಕುಗ್ಗಿ ಕುಂದಿದರೂ
ಮನದೊಳ್ ಹರುಷದಿಂ
ಅನುನಯದಿ ಎರೆಯುವಳು ಹಸುಕಂದಗೇ
ಕಂದ ನೀ ಬಾರಯ್ಯ
ಚಂದದರಗಿಣಿಯೆ ಬಾ
ಸುಂದರವದನ ಮದನ ನೀ ಬಾರೈ ಬಾ
ಎಂದೆನುತ ಬಣ್ಣಿಸುತ
ಮುದದೊಳ್ ಲಲ್ಲೆಗರೆದು
ಎದೆಗಪ್ಪಿ ಮುದ್ದಿಸುತ ಸಂತಸದೊಳು
ಕಾಳುಗಳ ಚಾಚುತಾ
ಬಾಲಕನ ಎದೆಗವಚಿ
ಲೀಲೆಯಿಂ ಮೈದಡವಿ ತೈಲಮಂ ಪೂಸಿ
ಮೆಲುಮೆಲನೆ ಬಿಸಿನೀರ
ಒಲುಮೆಯಲಿ ಹಾಕುತಾ
ಬಲು ಅಕ್ಕರೆಯೊಳು ನೀರೆರೆಯುತಿಹಳು
(ಕುಸುಮ ಷಟ್ಪದಿ)
