STORYMIRROR

Vijaya Bharathi.A.S.

Abstract Classics Others

5  

Vijaya Bharathi.A.S.

Abstract Classics Others

ಸೂತ್ರಧಾರಿ ಶ್ರೀ ಕೃಷ್ಣ

ಸೂತ್ರಧಾರಿ ಶ್ರೀ ಕೃಷ್ಣ

1 min
487

 


1. ದಿವಿಯಿಂದ ಭುವಿಯೆಡೆಗೆ

  ದೇವಕಿಯ ಉದರದಿಂ

  ಅವತರಸಿ ಬಂದ ಸೂತ್ರಧಾರಿ ಕೃಷ್ಣ

  ಮಾವನಾ ಸೆರೆಮನೆಯ

  ಕಾವಲನು ಭೇದಿಸುತ

  ಧಾವಿಸಿದ ಗೋಕುಲಕೆ ಶಿಶುರೂಪದಿ


2. ನಂದನಾ ಮನೆಯೊಳು

  ಚಂದ ಗೋವಳರೊಡನೆ

  ಅಂದದಲಿ ಬೆಳೆದನಾ ನಂದಕುವರಾ

  ಬಂದ ಪೂತನಿ ಶಕಟ

  ಮೊದಲಾದ ರಕ್ಕಸರ

  ಕೊಂದು ಮುಗಿಸಿದನಾ ಬಾಲಗೋಪಾಲ


3. ಮುಂದೆ ಮಧುರೆಗೆ ಬಂದು

  ಮದದ ಮಾವನ ಕೊಂದು

  ತಂದೆ ತಾಯಿಯಿಂ ಸೆರೆಯಿಂ ಬಿಡಿಸುತಾ

  ಮುದದಿಂದ ಮುದ್ದಾಡಿ

  ಕಂದ ಬಿಗಿದಪ್ಪಿದನು 

  ವಂದಿಸುತೆ ಚರಣಕೆರಗಿದನು ಶೌರೀ


4. ಬರಡು ಖಾಂಡವವನವ

  ಸಿರಿಸೊಂಪನಾಗಿಸುತ

  ವರಧರ್ಮನಂದನಗೆ ಅಭಿಷೇಕಮಂ

  ನೆರವೇರಿಸುತ ನಗುತ

  ಭರದಿ ಬೆರಗುಗೊಳಿಸುತ

  ನೆರವ ನೀಡಿ ಸಲಹಿದ ಪಾಂಡುಸುತರಾ


5. ಜೂಜಿನೊಳು ಪಣವಿಟ್ಟು

  ಬಾಜಿಗಳ ಒಡ್ಡುತ್ತಾ

  ಹೆಜ್ಜೆಹೆಜ್ಜೆಗೂ ಸೋತು ಸೊರಗುತ್ತಾ

  ರಾಜಪದವಿ ಕಳಕೊಂಡ

  ರಾಜ ಧರ್ಮರಾಯನ

  ಸೋಜಿಗದಿ ಕೈ ಪಿಡಿದ ಸೂತ್ರಧಾರಿ ಶ್ರೀ ಕೃಷ್ಣ


6. ತಂಗಿ ಕೃಷ್ಣೆಯ ಮಾನ

  ಭಂಗವನೆ ತಡೆಯುತ್ತಾ

  ಸಂಗಡದಿ ದಿವ್ಯಾಂಬರವನು ಇತ್ತು

  ಅಂಗನೆಯ ಸಂತೈಸುತ

  ಹಗೆಗಳ ಶಿರಗಳ ತರಿವ

  ವಾಗ್ದಾನ ಇತ್ತಾ ಸೂತ್ರಧಾರಿ ಶ್ರೀಕೃಷ್ಣ


7. ಸಮರ ಸಂಧಾನವನು

  ಸಮರಸದಿ ಸಾರುತ್ತಾ

  ಅಮರವಾಣಿಯ ಮೊಳಗಿದನು ಮುರಾರಿ

  ಶಮದಮೆಯ ಸಾರುತ್ತಾ

  ಸಾಮದಾನ ಭೇದದೊಳ್

  ಸಮರವನು ತಡೆಯಲು ಸೆಣಸಿದಾ ಶೌರೀ


8. ಮಹಾರಣರಂಗದಲಿ

  ಮಹಾಭಾರತ ಮಧ್ಯದಲಿ

  ಮಹಾ ಭಗವದ್ಗೀತೆ ಭೋದಿಸುತಾ

  ಮಹೋತ್ಸಾಹ ತುಂಬುತ್ತಾ

  ಮಹಾ ನಾಟಕವಾಡಿಸಿದ

  ಮಹಾಮಾಯಾಸೂತ್ರಧಾರಿ ಶ್ರೀಕೃಷ್ಣ

 

9. ಸೂತ್ರಧಾರಿ ಶ್ರೀಕೃಷ್ಣ

  ಪಾತ್ರಧಾರಿಗಳ ಹಿಂದಿದ್ದು

  ಚಿತ್ರವಿಚಿತ್ರ ಲೀಲೆಗಳನಾಡಿಸುತ

  ಮಿತ್ರ ಪಾರ್ಥನ ಕೂಡಿ 

  ರಥವ ನಡೆಯಿಸುತ

  ಪಾರ್ಥಸಾರಥಿಯೆನಿಸಿದ ಶ್ರೀ ಕೃಷ್ಣ


10. ಕುರುವಂಶ ಕುಮಾರರ

   ಕುರುಕ್ಷೇತ್ರ ಕಾಳಗವು

   ಭಾರತದಾ ಇತಿಹಾಸದೊಳು ಮಿಳಿತು

   ಧರ್ಮರಾಜ್ಯವ ಬೆಳೆಸಿ

   ವಿರಮಿಸಿದ ವಾಸುದೇವ

   ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ


(ಕುಸುಮ ಷಟ್ಪದಿ)



ಶ್ರೀ ಕೃಷ್ಣಾರ್ಪಣ ಮಸ್ತು



Rate this content
Log in

Similar kannada poem from Abstract