ವನದೇವತೆ
ವನದೇವತೆ
ಬಾನೆತ್ತರಕೆ ಬೆಳೆದ ಆ ಸಾಲು ವೃಕ್ಷಗಳು
ಆದರದ ನೋಡಲು ಸಾಲದೀ ಕಣ್ಣುಗಳು
ಎತ್ತ ನೋಡಿದರತ್ತ ಹಚ್ಚಹಸಿರು
ಸುತ್ತಲೂ ಗಿರಿಮಾಲೆ ವನದೇವಿಗೆ
ವನದೆಲ್ಲೆಡೆ ನಲಿಯುತಿಹ ಚಿಗುರೆಗಳು
ಅಲ್ಲಲ್ಲಿ ವಲ್ಮೀಕ ನೆನಪಿಸಿದೆ ವಾಲ್ಮೀಕಿ
ಶಾಂತ ವಾತವರಣದೀ ಸಿರಿವನ
ಧ್ಯಾನ ಪೋಷಕ ತಾಣ ತಪೋವನ
ಋಷಿಮುನಿಗಳಾ ನೆಲೆಮನೆ ಅಂದು
ಆದರಾರೂ ಇಲ್ಲ ತಪಗೈಯಲಿಂದು
ಮುಳುಗುತಿಹ ನೇಸರನ ಕಿರಣಗಳು
ಸುತ್ತ ಮುತ್ತಲೂ ಪಸರಿಸುತಿರೆ
ನಾಚಿ ನೀರಾಗಿಹಳು ನೀರೆ ವನದೇವಿ
ಅದರೂ ಹೆದರಿಕೆಯು ವಿರಹದಾ ವೇದನೆಯು
ಕಂದಿಹಳು ಆ ತರುಣಿ ರವಿಯ ನಿರ್ಗಮನದಿ
ಆಳುಕಳವಳಾದರೂಭರವಸೆಯ ಹೊಂದಿಹಳು
ಮತ್ತೆ ಉದಯಿಸಿಬರುವ ತನ್ನ ನೇಸರನಿಗಾಗಿ
ಹಗಲಲ್ಲಿ ಮೋಹಿಸುತ ಇರುಳಲ್ಲಿ ಹೆದರಿಸುತ
ರುದ್ರರಮಣೀಯವೀ ವನಸಿರಿಯ ಸೊಬಗು