ಅಕ್ಷರ ಮಾಲೆ ಅಮ್ಮ
ಅಕ್ಷರ ಮಾಲೆ ಅಮ್ಮ
ಅಕ್ಕರೆಯ ಸಕ್ಕರೆಯ ಅಮ್ಮ
ಆನಂದದಾಯಿ ಓ ತಾಯಿ
ಇನಿದನಿಯ ಜೋಗುಳಪಾಡಿ
ಈಪಾಟಿ ಮುದ್ದುಗರೆದು
ಉಂಡೆ ಚಕ್ಕುಲಿಗಳನಿತ್ತು
ಊಟೋಪಚಾರಗಳ ಮಾಡಿ
ಎದೆಯೊಳಗಪ್ಪಿಕೊಂಡು
ಏಕಾಗ್ರಚಿತ್ತದಲಿ ಸಂತೈಸಿದ
ಐಂದ್ರಜಾಲಿಕ ಮಾಂತ್ರಿಕೆ
ಒಲುಮೆಯ ಮಳೆಗರೆದು
ಓಲೈಸಿದ ಓ ತ್ಯಾಗಮಯಿ
ಔಡುಗಚ್ಚಿ ಅವಿರತ ದುಡಿದು
ಅಂಗಳದಿ ಆಟವಾಡಿಸುತ
(ಅಃ)ಹೋರಾತ್ರಿ ದಣಿವ ಧಾತ್ರಿ
ಕಂದ ಬಳಲಿ ಬಂದಾಗ
ಖಾತರದಿ ಓಡಿ ಬಂದು
ಗಕ್ಕನೆ ಅಪ್ಪಿ ಹಿಡಿದು
ಘಮ್ಮನೆಯ ಗಂಜಿ ಕುಡಿಸಿ
ಸಂತೈಸುವ ಕರುಣಾಮಯಿ
ಚಂದದಲಿ ಸಂತೈಸುತ
ಛಾವಣಿಯ ಮೇಲಕ್ಕೊಯ್ದು
ಜೋಕಾಲಿಯಾಡಿಸುತ
ಝಲ್ಲರಿಯ ಝಣತ್ಕರಿಸಿ
ಕುಣಿಸಿ ಕುಣಿವ ದಯಾಮಯಿ
ಟೋಪಿಯಾಟ ಆಡಿಸುತ
ಠಕ್ಕತನದಿ ಮರೆಯಾಗುತ
ಡೆಂಡೆನಿಸುತ ನಕ್ಕು ನಗುತ
ಢಾಳಿಸುತ ಬಿಗಿದಪ್ಪಿ
ಲಲ್ಲೆಗರೆವ ಲಲನಾಮಣಿ
ತಂಟಲುಮಾರಿ ಮಕ್ಕಳನ್ನು
ಥಟ್ಟನೆ ಹತೋಟಿಗೆ ತಂದು
ದಂಡವಿರದೆ ದಂಡಿಸುತ್ತಾ
ಧೀಮಂತಿಕೆಯ ಮೆರೆಸುತ್ತಾ
ನಲ್ನುಡಿಯ ನಿಷ್ಣಾತೆ ಮಾತೆ
ಪಾರಂಪರಿಕ ಸಂಸ್ಕಾರ ನೀಡಿ
ಫಟಿಂಗತನವ ಹೊಡೆದೋಡಿಸಿ
ಬೆಣ್ಣೆಮಾತುಗಳನು ಆಡಿ
ಭಾಗ್ಯವಂತನಾಗಿಸುವ
ಮಮತಾಮಯಿ ಓ ಮಾತೆ
ಯಥೇಚ್ಛ ಪ್ರೀತಿಯನಿತ್ತು
ರಕ್ಷಾಕವಚದಂತೆ ಪೊರೆದು
ಲಲ್ಲೆಗರೆದು ಓಲೈಸಿ ಬೆಳೆಸಿ
ವಾಂಛಲ್ಯದ ಲೇಪ ಹಚ್ಚಿ
ಶಕ್ತಿಮೀರಿ ತ್ಯಾಗಮಾಡಿ
ಷಡ್ರಸಗಳ ಊಟ ಉಣಿಸಿ
ಸಂರಕ್ಷಿಸಿ ಸಲಹಿ ಪೊರೆದ
ಹೊತ್ತು ಹೆತ್ತು ಭುವಿಗೆ ತಂದ
ಓ ಜನನಿ ನಿನಗೆ ಮಿಗಿಲಾರು?
ನಿನಗೆ ಸಮನಾರು?
ನಿನಗೆ ಮಿಗಿಲಾದ
ದೇವರಿಲ್ಲ ಈ ಜಗದೊಳು.
ಝಲ್ಲರಿ=ಒಂದು ರೀತಿಯ ವಾದ್ಯ
ಡೆಂಡೆಣಿಸಿ=ಉಲ್ಲಾಸದಿಂದ
ಢಾಳಿಸುತ =ವೇಗವಾಗಿ
