ಪುಸ್ತಕದ ಸ್ವಗತ
ಪುಸ್ತಕದ ಸ್ವಗತ
ಅರೆ ತೆರೆದ ನನ್ನ ತೊರೆದು
ಬಿರಿದ ಸುಲೋಚನವ ಬಿಸುಟು
ಮರೆಯಾದನೆಲ್ಲಿ ಆ ಓದುಗ?
ಬರಲಾರನೇ ಮರಳಿ ನನ್ನ ಬಳಿಗೆ?
ಬೃಹತ್ ಗ್ರಂಥ ನನ್ನೊಳಗೆ
ಮಹತ್ ವಿಷಯಗಳಡಗಿಹುದು
ಅಹರ್ನಿಶಿ ಕಾದು ಕುಳಿತಿಹೆ ನಾ
ಮಹಾನ್ ಓದುಗನ ಬರವಿಗೆ
ಎಲ್ಲಿ ಹೋದ ನನ್ನ ಓದುಗ ?
ಇಲ್ಲಿ ತನ್ನ ಸುಲೋಚನವನಿಟ್ಟು
ಇಲ್ಲಿಲ್ಲ ನನ್ನ ಕೇಳುವರು ಈಗ
ಇಲಿ ಜಿರಳೆ ಹಲ್ಲಿಗಳ ಬಿಟ್ಟು
ಬರುವನೋ ಬಾರನೋ?
ಮರಳಿ ನನ್ನನ್ನೆತ್ತಿಕೊಳಲು
ಮರೆತು ಹೋದೆನೇ ನನ್ನ
ಮರಳಿ ಬಾರನೇ ಇನ್ನೆಂದೂ?
