ಕನಸೊಂದು ಶುರುವಾಗಿದೆ!!
ಕನಸೊಂದು ಶುರುವಾಗಿದೆ!!
ನಸು ಮುಂಜಾವಿನ ವೇಳೆಯಲ್ಲಿ
ಹೊಸ ಕನಸೊಂದು ಶುರುವಾಗಿದೆ
ಕತ್ತಲೆಯ ಬದುಕಿನಲಿ ಯಾರೋ
ಬಂದು ಬೆಳಕಿನ ದೀಪವಿಟ್ಟಂತೆ!!
ಬರಿದಾದ ಮನದಲ್ಲಿ ಬಣ್ಣ ಬಣ್ಣದ
ಕನಸುಗಳ ಚಿತ್ತಾರ ಮೂಡುತಿದೆ!!
ರಂಗು ರಂಗಿನ ರೆಕ್ಕೆಯ ತೊಟ್ಟು
ಮನವು ಹಕ್ಕಿಯಂತೆ ಹಾರಬಯಸಿದೆ!!
ದಿನನಿತ್ಯದ ಏಕತಾನತೆಯ ಬದುಕಿನಲ್ಲಿ
ಕೊಂಚ ಬದಲಾವಣೆಯ ಗಾಳಿ ಬೀಸಿದಾಗ
ಮನಕೇನೋ ವಿವರಿಸಲಾಗದ ನವೋಲ್ಲಾಸ
ವೈವಿಧ್ಯಮಯ ಹೊಸತಾದ ಸಡಗರ ಸಂಭ್ರಮ!!
ಪಂಜರದ ಗಿಣಿಯಂತೆ ಬಂಧಿಯಾಗಿದ್ದ ಬಾಳಿನಲ್ಲಿ
ಭರವಸೆಯ ಕದವ ತೆರೆದು ಗಿಣಿಯು ಹೊರಬಂದಂತೆ!!
ಸಾಧನೆಯ ಹಾದಿಯಲ್ಲಿ ಒಂದೊಂದೇ ಮೆಟ್ಟಿಲೇರಿದಂತೆ
ಮೆಟ್ಟಿಲ ತುದಿಯಿಂದ ಕನಸು ಸಾಕಾರಗೊಂಡು ನಕ್ಕಂತೆ!!
ಹೊತ್ತು ಗೊತ್ತಿಲ್ಲದೆ ಕನಸುಗಳು ಬೀಳುತಿರಲು
ನನಸಾದೀತೇ ಮುಂಜಾವಿನ ಕನಸುಗಳು?!
ಅರ್ಥವಿಲ್ಲದ ಕನಸುಗಳೆಂದು ಮೆಲ್ಲನೆ ನಕ್ಕು
ಮಾಯವಾದೀತೇ ನಾ ಕಂಡ ಕನಸುಗಳು?!