ಬಾಳಪಯಣ....
ಬಾಳಪಯಣ....
ಮುಂಗುರುಳು ಸರಿಸಿ ನಾಚಿ ನಗಲವಳು
ಬಿದ್ದನವನು ಅವಳ ನಗುವ ಮೋಡಿಗೆ
ಕಣ್ಸನ್ನೆಯಲ್ಲೇ ಪ್ರೀತಿ ವಿನಿಮಯವಾಗಲು
ಬೇಕಿಲ್ಲ ಬೇರೇನೂ ಈ ಜೋಡಿ ಹಕ್ಕಿಗೆ
ನಲ್ಲ ಸನಿಹಕೆ ಬರಲು ನಾಚಿ ಕೆಂಪೇರಿತ್ತು
ನಲ್ಲೆಯ ಅಧರ, ಕೆಂಪು ಗುಲಾಬಿಯಂತೆ
ಕಂಗೊಳಿಸುವಳು ಹೂ ನಗೆ ಅರಳಿಸುತಾ
ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ
ಕಾಮನಬಿಲ್ಲಿನ ರಂಗಿನಂತೆ ನಲ್ಲೆಯ ರಂಗು
ಸಪ್ತವರ್ಣದಿ ಕಂಗೊಳಿಸುವಳವಳು ಅಂದದಿ
ನಲ್ಲೆಯ ಪಿಸು ಮಾತಿನಲಡಗಿಹುದು ಮುಗ್ಧತೆ
ನಲ್ಲ_ ನಲ್ಲೆಯ ಜೋಡಿಯಲಿಹುದು ಸ್ನಿಗ್ಧತೆ
ಮದುವೆಯೆಂಬ ಬಂಧನದಿ ಕೈ ಕೈ ಹಿಡಿದು
ನನಗೆ ನೀ ನಿನಗೆ ನಾನೆನ್ನುತಾ ಸಪ್ತಪದಿ ತುಳಿದು
ಸಂಗಾತಿಯಾದರು ಬಾಳಿನುದ್ದುಕ್ಕೂ ಜೊತೆಯಲ್ಲೇ
ನೋವಿನಲ್ಲೂ ಖುಷಿಯಲ್ಲೂ ಜೊತೆಯಾಗಿ ನಡೆದು
ನಲ್ಲ ನಲ್ಲೆಯರಂದು ಪತಿ ಪತ್ನಿ ಆಗಿಹರಿಂದು
ಬಾಳಬಂಡಿಯ ಸಾಗಿಸುತಾ ಜೊತೆ ಜೊತೆಯಲಿ
ಬಂಡಿಯ ಎರಡು ಚಕ್ರಗಳಂತೆ ಸುಖ ದುಃಖಗಳು
ಉರುಳಲೇಬೇಕು ಬದುಕು ಕಾಲ ಕಾಲಕ್ಕೆ ತಕ್ಕಂತೆ!

