ಭಾನು-ಭೂಮಿ
ಭಾನು-ಭೂಮಿ
ಸೂರ್ಯರಶ್ಮಿ ಸ್ಪರ್ಶಿಸಲು
ಹಸಿರು ಗರಿಯು ಬಿಚ್ಚಬೇಕು l
ಕಣ್ಣು ಬಿಡಲು ಜೀವಸೃಷ್ಠಿ
ಹೊಸತು ರಾಗ ಹಾಡಬೇಕು ll
ಕಾಯುತ್ತಿದ್ದ ಭೂಮಿಗೆ
ಚೈತನ್ಯವ ತುಂಬಬೇಕು l
ಮಂಜು ಮೆಲ್ಲೆ ಕರಗುತಾ
ಮುತ್ತು ಹನಿಯು ತಾಗಬೇಕು ll
ಚಿಗುರೆಲೆಯ ತುದಿಯಲೀ
ನೀರಹನಿಯು ಹೊಳೆಯಬೇಕು l
ತರುಲತೆಗಳೆಲ್ಲ ಕೂಡಿ
ಉಸಿರನಾದ ಹೊಮ್ಮಬೇಕು ll
ಜಡವ ಕೊಡವಿ ಏಳಬೇಕು
ಸೃಷ್ಟಿಶೀಲರಾಗಬೇಕು l
ಮನುಜರೆಲ್ಲಾ ಕಣ್ಣಬಿಟ್ಟು
ನವನವೀನರಾಗ ಬೇಕು ll
ನವಬೆಳಕಿಗೆ ನವಯುಗದ
ಭಾಷ್ಯವನ್ನು ಬರೆಯಬೇಕು l
ಪರಿವರ್ತನೆ ಕ್ರಾಂತಿಗೀತೆ
ವಿಶ್ವದಲ್ಲೇ ಬೆಳಗಬೇಕು ll
ಸೂರ್ಯರಶ್ಮಿ ಸ್ಪರ್ಶಿಸಲು
ಹಸಿರು ಗರಿಯು ಬಿಚ್ಚಬೇಕು l
ಕಣ್ಣು ಬಿಡಲು ಜೀವಸೃಷ್ಠಿ
ಹೊಸತು ರಾಗ ಹಾಡಬೇಕು ll