ಸ್ಪರ್ಶ
ಸ್ಪರ್ಶ


ಗೋದೂಳಿ ಮೂಡಿ ಮೋಡ ಕವಿದ ಹೊತ್ತು,
ಮಿಂದೆದ್ದು ಹರಡಿದ ಕಪ್ಪು ಹೆರಳಿನಂತಿತ್ತು.
ಬಣ್ಣ ಚೆಲ್ಲಿ, ಆಗಸ ಮದುವಣಗಿತ್ತಿ
ಕಣ್ಣ ಸನ್ನೆಗೆ ನಿಶೆಗೆ ಮತ್ತೇರಿದಂತೆ,
ಸಣ್ಣ ನಗೆ ತುಟಿಯಂಚಲಿ ತೇಲಿದಂತೆ
ನಿನ್ನ ಬೆರಳಸ್ಪರ್ಶಕೆ ಹಾತೊರೆದಂತೆ.
ಗಾವುದ ದೂರ ನೆಟ್ಟ ನೋಟಕೂ ಇತ್ತು
ಬೇಸರದ ಛಾಯೆ, ನೀರಸವೆನಿಸಿತ್ತು.
ಅಂಗೀಕಾರ, ನಿರಾಕರಣೆಗಳ ಕಸರತ್ತು
ಪ್ರತಿನಿತ್ಯ ಬದುಕನ್ನೇ ಮುಕ್ಕುತ್ತಿತ್ತು.
ಕಂಬನಿ ಹೆಪ್ಪಿಟ್ಟು, ಬಾಡಿದ ಕಣ್ಣಾಲಿ,
ಮೌನ ಪ್ರವಾಹಕೆ ಆಹ್ವಾನವಿತ್ತಲ್ಲಿ,
ಕೊಚ್ಚಿಹೋಗುವಾಸೆ ಆ ಸ್ಪರ್ಶದಲ್ಲಿ,
ಸಾತ್ ನೀಡಿದ ಮಳೆ ಹನಿಸಿದಲ್ಲಿ.
ಆಪೋಶನಕ್ಕೆ ಕಾದಿದ್ದ ಭುವಿಯಂತೆ
ಪೋಷಣೆಗೆ ಹಾತೊರೆದ ಹಸಿರಂತೆ
ಘೋಷಣೆಗೆ ಶುರುವಿಟ್ಟ ಕಲರವತೆ
ಪೋಣಿಸಿತ್ತು ಮುತ್ತಹನಿ ಮಾಲೆಯಂತೆ
ಕರಗುತ್ತಲಿತ್ತು ಇರುಳು, ಬೆರಳ ಸ್ಪರ್ಶಕೆ
ತರುಗಳು ಚಿಗುರಿ, ಹೂವು ಅರಳುವಿಕೆ
ಸಜೀವತನ ಮೊಳೆತು ಪ್ರಭಾವಳಿಕೆ..
ಸವಿಜೇನ ಸವಿದಂತೆ ದುಂಬಿಯಾಕಳಿಕೆ
ಗಮ್ಮನೆ ಹರಡಿದ ಸುಂಗಧ ಪುಷ್ಪಗಳು
ಸುಮ್ಮನೆ ನಕ್ಕು ನಲಿದ ಹೂಪಕಳೆಗಳು
ಸಣ್ಣಗೆ ಕರಗುವ ಮಂಜಿನ ಹನಿಗಳು
ಮಿಣ್ಣಗೆ ಮೂಡಿದ ಮಂದಹಾಸಗಳು.
ಅತೀಶಯೋಕ್ತಿಯಲ್ಲ, ಇದು ಸಚೇತನ
ಮಡಿವಂತಿಕೆಯಿಲ್ಲ, ಇಲ್ಲಿ ನಿತ್ಯ ಸಿಂಚನ
ಚೆಲುವಿಕೆಗೆ ಮುಕ್ತಭಾವನೆಯ ಚಲನ
ನಲಿವಿಕೆಗೆ ಅಡೆತಡೆಯಿಲ್ಲದ ಕಂಪನ...