ಪಶ್ಚಾತ್ತಾಪ
ಪಶ್ಚಾತ್ತಾಪ


.
ನಿಶೆಯಂತರಾಳದಲಿ ದಿಶೆಗೆಟ್ಟು ಕುಳಿತಾಗ
ಜ್ಞಾನದೀವಿಗೆ ಪಿಡಿದು ನೀ ಮುಂದೆ ಬಂದೆ
ಅದರದರ ಹೊಂಬೆಳಕ ಕಾಂತಿಯನು ನೋಡದೆ
ನಿನ್ನತ್ತ ತಿರುಗದೆ ನಾ ಬಲು ದೂರ ಓಡಿದೆ
ಅಜ್ಞಾನ ತಿಮಿರವನು ಸರಿಸಲು ಮುಂಬಂದ
ನಿನ್ನಮೃತಹಸ್ತವ ದೂಡಿ ನಾ ಬೆನ್ನು ತಿರುಗಿಸಿದೆ
ದಯಾಳು ನೀ ನನ್ನ ಬಿಡದೆ ಬೆಂಬತ್ತಿ ಬಂದೆ
ಮಂಕು ಬಡಿದ ನನ್ನ ಮತಿಗೆ ಜ್ಞಾನಾಂಜನವ ಹಾಕಿದೆ.
ನಾ ಬೇಡದಿದ್ದರೂ ನೀ ಎನ್ನ ಹೃದಯದಲಿ ಕುಳಿತೆ
ಜ್ಞಾನ ದೀಕ್ಷೆಯ ನೀಡಿ ನನ್ನನುದ್ಧರಿಪ ಪಣ ತೊಟ್ಟೆ
ಆದರೆ ನಾನೋ ? ನಿನ್ನಿರುವಿಕೆಯನೇ ಮರೆತು
ವಿಷಯಸುಖಗಳನರಸುತ ಬಲು ನೊಂದೆ.
ಸಂಸಾರ ಚಕ್ರದಲಿ ಸಿಲುಕಿ ತೊಳಲಿದೆ
ಅರಿಷಡ್ವರ್ಗಗಳಲಿ ಸಿಲುಕಿ ಬಂಧಿಯಾದೆ.
ನಶ್ವರದ ಬದುಕಿಗೆ ಬೆಲೆಕೊಟ್ಟು ಭ್ರಮಿತಳಾದೆ.
ಕಡೆಗೂ ನನ್ನೊಳಗಿರುವ ನಿನ್ನಿರುವಿಕೆಯೆ ನೀನೇ ನೆನಪಿಸಿದೆ.
ನಿನ್ನ ಕಡೆ ನಾ ತಿರುಗುವಂತೆ ಮಾಡಿದೆ
ನಿನ್ನ ಜ್ಞಾನದ ಹೊಂಬೆಳಕು ಮೆಲ್ಲಮೆಲ್ಲನೆ ಹರಡಿ
ಅದರೊಳಗೆ ಮುಳುಗಿ ನಾ ಹರ್ಷಗೊಂಡೆ!