ಪ್ರೀತಿ ನಡುವಿನಲಿ...
ಪ್ರೀತಿ ನಡುವಿನಲಿ...


ಹೇಗೆ ಹೇಳಲಿ ನಾನು ಈ ನಿನ್ನ ಜೊತೆಯನು
ದಡವ ಮುತ್ತಿಕ್ಕಿ ಓಡುವ ತೆರೆಯೊಳು
ಆಗೀಗ ಬರುತಲಿ ಮರೆಯಾಗಿಬಿಡುವ
ನಿನ್ನ ಈ ಕಣ್ಣುಮುಚ್ಚಾಲೆ ಪ್ರೀತಿಗೆ ಸೋತಿಹೆನು
ಆಕಾಶದಲಬ್ಬರಿಸಿ ನಡೆವ ಮೋಡದ ತೆರದಿ
ಎತ್ತೆಲ್ಲಾ ಕುಣಿದಾಡಿ ಮೆರೆದರೂ ಸೋಲುವ
ಆ ಗುಡ್ಡದಾ ಮರಗಳಿಗೆ ಮುತ್ತಿಕ್ಕಿ ಮಳೆಯಾಗಿ
ಹರಿಸಿ ಆ ಪ್ರೀತಿಯ ಸೋನೆಯನು ಸುರಿಸೆ ನೀ
ಮರದೆಲೆ ಮೇಲೆ ಬಿದ್ದಿಹ ಆ ಮಳೆಬಿಂದು
ಮುದಗೊಂಡು ಮುತ್ತಿಕ್ಕಿ ಕಳಚಿ ಧರೆಗುರುಳುವ
ಸವಿಸುಖದ ಎಲೆಗಳ ಭಾಗ್ಯಕೆಣೆಯಲ್ಲುಂಟೆನುತಲಿ
ಧರೆಯ ಸೇರಿ ಬೀಜಕುಸಿರಾಗುವ ಜೀವಜಲವಾಗಿ
ಹೂವಿನಾ ಪರಿಮಳವೆಲ್ಲುಂಟೆಂದು ತೋರಲಾದೀತೆ
ನನ್ನ ನಿನ್ನೀ ಜೊತೆಯಲಿ ಗುರುತಿಸಲಾಗದು ಭಿನ್ನತೆ
ಪ್ರೀತಿ ಹುಟ್ಟಿದ ಮನಗಳಲಿ ಎರಡೆಲ್ಲಿದ್ದೀತು ಅಲ್ಲಿ
ನೀ ನನ್ನ ಜೊತೆಗಿರಲು, ಅಲ್ಲೊಂದೇ ಪ್ರೀತಿ ನಡುವಿನಲಿ