ಮೌನದಲುಸುರಿದ ಪ್ರೀತಿ
ಮೌನದಲುಸುರಿದ ಪ್ರೀತಿ
ಅದೊಂದು ಸುಂದರ ಸಂಜೆ
ಕೋಡಿ ಸಮುದ್ರ ಕಿನಾರೆಯಲ್ಲಿ
ನಾವಿಬ್ಬರೂ ಕುಳಿತಿರಲು
ಕೆಂಪನೆಯ ಸೂರ್ಯ ರಂಗೇರುತ್ತ
ಮುಳುಗಿ ಬಿಟ್ಟ ಸಮುದ್ರದೊಳಗೆ.
ಮಾತು ಮುಗಿಯದ ನಾವು
ಪ್ರೀತಿ ಸವೆಯಾದ ನಾವು
ಇನ್ನೂ ಅಲ್ಲೇ ಇದ್ದೆವು
ಅಲ್ಲಿದ್ದವರೆಲ್ಲ ಹೋಗಿ
ದಡವೆಲ್ಲ ಬರಿದಾಗೆ..
ಅಲ್ಲೆಲ್ಲಾ ನಾವೇ ನಾವಾಗಿ
ಏಕಾಂತತೆ? ಹೆಚ್ಚಾಗಿ
ಮಾತು ಮೌನವಾಗಿ
ಉಸಿರುಗಳಲೇ ಪ್ರೀತಿ ಬರಹ
ಬಹು ಸುಂದರವೆನಿಸಿ.
ಸಾಗರದಲೆಗಳು ದಡ ತಾಗಿ
ಹೋಗುವ ಗುಂಗಿನ ದನಿ
ದೂರದಲ್ಲೆಲ್ಲೋ ಮಕ್ಕಳು
ಕೂಗಿ ಕಿರುಚಿ ಆಡುವ ದನಿ
ಬಿಟ್ಟರೆ ನಾವಷ್ಟೇ ಅಲ್ಲಿ.
ಆಕಾಶದಿ ಡೊಂಕಾದ ಚಂದ್ರ
ಅದಕೊಪ್ಪುವ ಚುಕ್ಕೆಗಳ ಹಾಸು
ಆಗೊಂದು ಸರಿಸ್ವರ್ಗ ಕಂಡಂತೆ
ತಟ್ಟನೆ ನೀ ತುಟಿಗೊತ್ತಿದ ಮುತ್ತೋ
ಅಗಾಧ ನಿಧಿಯ ಸುರಿಮಳೆ.
ಅದಾಗಲೇ ಮೋಡಗಳು ಬಂದು
ಚಂದ್ರಮನು ಮರೆಯಾದ ಚುಕ್ಕಿಗಳ ಸೇರಿ.
ಚಂದ್ರನಿಗೆ ನಾಚಿಕೆಯಾಯಿತೋ
ಚುಕ್ಕೆಗಳೊಂದಿಗೆ ಸರಸಕಿಳಿದನೋ
ಗೊತ್ತಾಗಲಿಲ್ಲ ನೋಡಿ.
ನಾಚಿಕೆಯೆನಿಸಿ ಭಯವೆನಿಸಿ ನಿನಗೆ
ಬಟ್ಟೆಗಳ ಕೊಡವುತ ಏಳುತಲಿ
ಮನೆಯಲಿ ತಂಗಿ ಕೊಡುವ
ಕೀಟಲೆಯ ನೆನೆದು ನನ್ನ ಕೈ ಒತ್ತಿದ್ದು
ಯಾರಿಗೂ ಗೊತ್ತಾಗಲಿಲ್ಲ ಬಿಡು.