ಯಾರೇ ನೀ ಸುಂದರಿ
ಯಾರೇ ನೀ ಸುಂದರಿ


ಬರೆದೆ ನಾ ಮಧುರವಾದ ಕವಿತೆ ಬರೆದೆ
ಬರೆದೆ ನಾ ಸವಿಯಾದ ನೆನಪ ನೆನೆದು
ಬರೆದು ಮಡಚಿಟ್ಟೆ ನಿನ್ನ ಹೆಸರಿನ ಕೈಪಿಡಿ
ನಿನ್ನ ಹೊರತು ಬೇರೇನೂ ಸಾರಾಂಶ ಇಲ್ಲ
ಈ ಮನಸಿನಲ್ಲಿ ನೀ ಅಚ್ಚಳಿಯದೆ ಉಳಿದೆ!!
ಕವಲು ದಾರಿಯಲಿ ಕಣ್ಮುಚ್ಚಿ ನಡೆದೆ
ಸಿಹಿಯಾದ ಸ್ನೇಹ ನಿನ್ನೆಡೆಗೆ ಸೆಳೆದಂತಿದೆ
ಜೊತೆಗೂಡಿ ತಿರುಗಿದ ನೂರಾರು ತಿರುವುಗಳು
ಸುರಿವ ಮಳೆಯಲ್ಲೂ ಬೀಸುವ ನಿನ್ನ ನೆನಪುಗಳು
ಹೆಚ್ಚಾಗಿದೆ ಮನಕೆ ನಿನ್ನ ನೋಡುವ ತುಡಿತ!!
ಶುರುವಾಗಿದೆ ಕನಸಲ್ಲೂ ನಿನ್ನದೇ ಕನವರಿಕೆ
ಕುಳಿತಿದೆ ಹಗಲಲ್ಲೂ ನಿನ್ನದೇ ಹತ್ತಾರು ಚಿಂತೆ
ಕರೆದಾಗಿದೆ ನನ್ನನು ಕೈಬೀಸಿ ನಿನ್ನೊಲವು
ಎದೆಯಲಿ ಪ್ರೀತಿಯ ಮೊಳಕೆಯೊಡೆದು ಚಿಗುರಿದೆ
ಕಾಡುವ ಕನಸಿನ ಚೆಲುವೆ ಬಾರೆಯ ನನ್ನೆದುರು!!
ನೀನಾದೆ ನನಗೆ ಈ ಸೃಷ್ಟಿಯ ಸುಂದರ ಸೂತ್ರ
ಪ್ರೀತಿಯ ಬೇಡಿಯಲಿ ಬಂಧಿಯಾಗಿರುವೆ ನಾನಿಲ್ಲಿ
ಸೆರೆಯಾದೆನಾ ನಿನ್ನ ಹಿತವಾದ ಮನಸಲಿ
ತಿಳಿಯಾದ ಮನದ ಕೆರೆಯಲ್ಲಿ ನೆನೆದಿರುವೆ
ನನ್ನ ಕನಸಿನ ರೂವಾರಿ ನೀ ಯಾರೇ ಸುಂದರಿ!!