ನನ್ನಾಕೆಯ ಮುಂಗುರುಳು
ನನ್ನಾಕೆಯ ಮುಂಗುರುಳು


ನಿನ್ನ ಮುಂಗುರುಳು
ತಿಳಿಗಾಳಿಗೆ ಸಿಲುಕಿ
ತೀಡಿ ನನ್ನ ಮನವ ಸೆಳೆದಿದೆ
ನಿನ್ನ ಮುಂಗುರುಳು
ನೀ ನಡೆದಾಗ ಬಳುಕಿ
ನಾಚಿ ನನ್ನ ಬಳಿಗೆ ಕರೆದಿದೆ
ನಿನ್ನ ಮುಂಗುರುಳು
ಹಾಗೆ ಸುಮ್ಮನೆ ಬಾಗಿ
ನಿನ್ನ ಕೆನ್ನೆಯ ಚುಂಬಿಸಿದೆ
ನಿನ್ನ ಮುಂಗುರುಳು
ನನಗೆ ತಂಗಾಳಿಯಾಗಿ
ಪ್ರೀತಿಯ ತಂಪು ತಂದಿದೆ
ನಿನ್ನ ಮುಂಗುರುಳು
ತುಂಟಿಯಾಗಿ ಸಿಹಿಯ
ಸವಿಯಲು ನನ್ನ ಕರೆದಿದೆ
ನಿನ್ನ ಮುಂಗುರುಳು
ನೋವಿನ ಕಹಿಯ
ಮರೆಸಿ ನನ್ನ ನಗಿಸುತಿದೆ
ನಿನ್ನ ಮುಂಗುರುಳು
ಈ ಬಾಳ ಪಯಣಕೆ
ನನ್ನ ಜೊತೆಯ ಬೇಡಿದೆ
ನಿನ್ನ ಮುಂಗುರುಳು
ನಮ್ಮ ದಾಂಪತ್ಯಕೆ
ಸುಖದ ಸಿರಿಯ ತಂದಿದೆ
ಮನಸೆಳೆದ ಮುಂಗುರುಳೇ
ನಮ್ಮ ಪ್ರೇಮ ಪಯಣಕೆ
ಆಗು ನೀ ಅನಿಕೇತನ
ಬದುಕಿನ ಪುಟ ಪುಟದಲ್ಲು
ರಚಿಸು ಪ್ರೀತಿಯ ಕವನ