ಅರಳುವ ಹೂ
ಅರಳುವ ಹೂ
ಚೆಂದುಳ್ಳಿ ಚೆಲುವೆ ಕುಸುಮವೇ ನೀ
ಬಗೆ ಬಗೆಯ ಪುಷ್ಪವಾಗಿ ಅರಳಿ ನಿಂತಿರುವೆ
ವಿವಿಧ ಬಣ್ಣಗಳಲ್ಲಿ ಮಿಂದೆದ್ದು ನೀ
ಪರಿ ಪರಿಯ ಪರಿಮಳವ ಸೂಸುತಲಿರುವೆ!!
ಸೊಂಪು ಕಂಪಿನ ಕೆಂಡಸಂಪಿಗೆಯೇ ನೀ
ದಾರಿಯುದ್ದಕ್ಕೂ ಸುವಾಸನೆಯ ಬೀರುತ್ತಿರುವೆ
ಘಮ ಘಮಿಸುವ ಮುದ್ದು ಮಲ್ಲಿಗೆಯೇ ನೀ
ಹಸಿರೆಲೆಗಳ ನಡುವೆ ನಗುತಲಿ ಮುದ್ದುಗರೆಯುತಿರುವೆ!!
ಮುಳ್ಳುಗಳ ನಡುವೆ ಇರುವ ಚೆಂಗುಲಾಬಿಯೇ
ನೀ ರಾಣಿಯೆಂದು ಬೀಗುತಲಿರುವೆ
ಹೂಬನಕ್ಕೆ ಕಳೆ ತರುವ ಕನಕಾಂಬರಿಯೇ
ನೀ ಲಲನೆಯರ ಮುಡಿಯಲಿ ಕಂಗೊಳಿಸುತಲಿರುವೆ!!
ಹಬ್ಬಗಳ ನಡುವೆ ಮಿಂದೆದ್ದ ಸೇವಂತಿಯೇ
ನೀ ಹೂವ ಸಂತೆಯಲಿ ಸೋಜಿಗವ ತೋರುತಲಿರುವೆ
ಹೂದೋಟದ ಸಾಲಿನಲಿ ನಿಂತ ಸೂರ‍್ಯಕಾಂತಿಯೇ
ನೀ ನೇಸರನ ಕಿರಣಗಳಿಗೆ ಸೋತು ಅರಳುತಲಿರುವೆ!!
ಬೇಲಿಯ ಬದಿಯಲ್ಲಿ ಬೀಗುವ ದಾಸವಾಳವೇ
ನೀ ಅರಳಿ ಮುದುಡಿ ನಿನ್ನ ಸೌಂದರ್ಯ ತೋರುತ್ತಿರುವೆ
ಸುಗಂಧ ಸುರಿಸುವ ಸುಗಂಧರಾಜನೇ
ನೀ ಮಂಗಳ ಕಾರ್ಯಕ್ಕೆ ಶುಭದಾಯಿಣಿಯಾಗಿರುವೆ!!
ಬಾಡದೆ ಸೊಗಸು ತೋರುವ ಗೊಂಡೆ ಹೂವೇ
ನೀ ಹಬ್ಬಗಳಿಗೆ ಶುಭ ಕೋರುವೆ
ಓಷಧಿಯ ಗುಣ ಹೊಂದಿರುವ ನಿತ್ಯಪುಷ್ಪವೇ
ನೀ ಬಗೆ ಬಗೆಯ ವರ್ಣಗಳಲಿ ರಂಜಿಸಿರುವೆ!!
✍️ ಪುಷ್ಪ ಪ್ರಸಾದ್
