ಪರಮಸುಖಿ
ಪರಮಸುಖಿ
ನಿಸರ್ಗದೊಳು ಗಾಯನ ನುಡಿಸುತಿರೆ ಕೋಗಿಲೆ
ಸಂಗೀತಕೆ ಮನಸೋತು ನಲಿದು ಅರಳಿತು ನೈದಿಲೆ
ಬಿರಿವ ಮಲ್ಲಿಗೆ ಮೊಗ್ಗೂ ನೀನೇ ಚೆಲುವೆ
ಹಸಿರೆಲೆಗಳಲಿ ನಳನಳಿಸುವ ಹನಿಬಿಂದು ನೀನೆ ಚೆಲುವೆ!!
ಕೆಂಬಣ್ಣದಿ ಮಿಂಚುತಿಹುದು ಮುಸ್ಸಂಜೆ ಮುಗಿಲಿಂದು
ಇಳೆಗಿಳಿದ ಭಾಸ್ಕರನು ಉಷೆಯೊಡನೆ ನಗಲೆಂದು
ಎನ್ನೆದೆಯ ಬಾಂದಳದಿ ಚಿತ್ತಾರ ನೀನೆ ಒಲವೇ
ಶಶಿಯಂತೆ ನೀನಿರಲು ಬೆಳ್ನೊರೆ ನಾನೇ ನನ್ನೊಲವೆ!!
ನಕ್ಷತ್ರಗಳು ಹೊಳೆಯುತ್ತಿವೆ ನಿನ್ನಯ ಕಂಗಳಂತೆ
ನಿನಗಾಗಿ ಹೊತ್ತು ತಂದಿರುವೆ ಪ್ರೀತಿಯ ಸಂತೆ
ನಿನ್ನ ಕಣ್ಣಲ್ಲಿರೋ ಲಜ್ಜೆಗೆ ಮುಳುಗೋಗಿರುವೆ ನಾ ಗೆಳತಿ
ನಿನ್ನ ಕಾಲ್ಗೆಜ್ಜೆ ಸದ್ದಿಗೆ ಕಳೆದೋಗಿರುವೆ ನೋಡೆ ಒಡತಿ!!
ಜೇನ ಹನಿಯಂತೆ ಕಾಣುತಿರುವುದು ನಿನ್ನಧರ
ಅದರೊಡೆಯ ನಾನೆಂಬ ಕಲ್ಪನೆಯೇ ಮಧುರ
ತಾಕಿದಂತೆ ಮಾಮರಕೆ ಸುಳಿಗಾಳಿ ಬೀಸುತಲಿ
ಪರಮಸುಖಿಯಾದೆ ನೀ ಬಂದು ನನ್ನ ಸೇರುತಲಿ!!
✍️ ಪುಷ್ಪ ಪ್ರಸಾದ್
