***ನೀಲಶ್ಯಾಮ***
***ನೀಲಶ್ಯಾಮ***


ತುರುಬಿಗೆ ಮಲ್ಲಿಗೆಯ ಮುಡಿಸಿ
ಸೆರಗ ಮುಂದಲೆಗೆ ಹೊದಿಸಿ
ಹೂಮುತ್ತ ತುಟಿಯ ಮೇಲಿರಿಸಿ
ಪಾದಕಲತಿಗೆ ತೀಡಿ ಮುತ್ತಿಟ್ಟ ದಿನವೇ
ನಾ ನಿನ್ನ ಅಪ್ಪಿಬಿಟ್ಟಿದ್ದು ನೆನಪಿದೆಯೆ ನಲ್ಲಾ
ನೀನಾಗ ಬೆಪ್ಪಾಗಿ ಹುಚ್ಚು ನಗೆ ನಕ್ಕು
ಹೊಳೆದಂಡೆ ಮರಳಲ್ಲಿ ಬಿದ್ದು ಹೊರಳಿದ್ದೆ
ಕಿರುಗೆಜ್ಜೆ ನಾಧದ ಹೆಜ್ಜೆ ಸದ್ದಿಗೆ
ಕುಡಿಹುಬ್ಬ ಕುಣಿಸಿದ್ದೆ..
ನೆರಿಗೆಗಳ ಅಂಚಿನಲಿ ಮುಖವಿಟ್ಟು
ಸುಖ ನಿದ್ದೆಯಲಿದ್ದ ಸಖ ನಿನ್ನ
ಮಂದಹಾಸದ ಭಾವ ನನಗಿಷ್ಟ
ಒಲವು ಚೆಲುವಿನ ಸವಿನೋಟ
ಕೈಯೊಳಿದ್ದ ನವಿಲ ಗರಿಯದು ನುಲಿದು
ಪಾಡಿದೆ ಮೋಹನ ರಾಗದಾರಾಧನೆ
ಮನದ ಕನ್ನಡಿ ಬಿಂಬಿಸಿ ನಿನ್ನನುರಾಗ
ಹುಚ್ಚುಹೊಳೆಯಲಿ ತೇಲಿಸುತ್ತಿದೆ ನನ್ನ.
ಇಹಪರದ ಹಂಗಿಲ್ಲ ಸುತ್ತಲಾರಿಹರೆಂಬ
ಗೊಡವೆ ನನಗಿಲ್ಲ ಬಿಡುವೆನೆಲ್ಲ ಬಂಧನವ
ತೊರೆದು ನಾನು ನನ್ನದೆಂಬ ಹಮ್ಮುಗಳ
ಕರೆದುಕೊ ಕೃಷ್ಣಾ ನಿನ್ನೆದೆಯ ಮಾಲೆಯಾಗಿ..