ಮದುಮಗಳ ಗೆಳತಿ
ಮದುಮಗಳ ಗೆಳತಿ
ನೆಂಟರಿಷ್ಟರ ನಡುವೆ ಸುಳಿದಾಡಿದವಳ
ಕಾಡಿಗೆ ಕಂಗಳ ಚೂಪುನೋಟವೊಂದು,
ಮೊನಚಾಗಿ ತಾಕಿತ್ತು ಎದೆಯ ಗೂಡಿಗೆ.
ಕೆಟ್ಟ ಕುತೂಹಲದಿ ಅವಳನ್ನೇ ಹಿಂಬಾಲಿಸಿದ್ದೆ ನೋಟದಲ್ಲೇ.
ಜರೀಪಂಚೆ, ಮುಂಡಾಸಿನೊಳಗೆ
ಮರೆಯಾದ ಹದಿಹರೆಯದ
ಎದೆಯ ಹರವಿಗೆ ಮಾರು ಹೋಗಿ,
ನಾಚಿಕೆ ತೊರೆದು ಕದ್ದು ನೋಡುತ್ತಲೇ
ಮನಕದವ ನೂಕಿ ಒಳಹೊಕ್ಕಳಂತೂ.
ಶೀಘ್ರ ಮಂತ್ರೋಚ್ಛಾರಣೆ ನಡುವೆ
ದೀರ್ಘ ಪಿಸುಮಾತುಗಳನಾಡುತ್ತ
ಮದುಮಗಳ ನಗಿಸಿ, ಕೆನ್ನೆ ಕೆಂಪು
ಮಾಡಿಕೊಂಡವಳನ್ನು ಮತ್ತೆ ಮತ್ತೆ ಕಂಡು,
ನಿಂತಲ್ಲೇ ಮೈಮನ ಹಗೂರಾದನುಭವ.
ಬೆಳದಿಂಗಳ ಮೈಬಣ್ಣಕೆ, ಕೇಸರಿ ಸೀರೆ,
ಗುಲಾಬಿಯೆಸಳಿನ ತುಟಿಯಂಚಿನಲ್ಲಿ
ನಗು ತುಂಬಿ, ಬಗೆಬಗೆಯ ಆಸೆಗಳನ್ನು
ನನ್ನೊಳಗೆ ಮೆಲ್ಲಮೆಲ್ಲನೆ ತುಂಬುತಿಹಳು,
ಗಲ್ಲ ಸವರಲೇ ಒಮ್ಮೆ ಎಂದೆನಿಸುವಷ್ಟು.
ಸಂಗಾತಿಗಳ ಐನಾತಿ ಮಾತಿಗೆ ನಾಚುತ್ತ,
ಬಾಚಿಕೊಂಡಳು ನಾನಿತ್ತ ಮೆಚ್ಚುಗೆಯ.
ಗೋಪಿಕೆ ರಾಧೆಗೆ ವನಮಾಲಿ ನಾನಾದೆ
ಮೋಹದಿ ಸಿಲುಕಿದೆವು ಕ್ಷಣಮಾತ್ರದಲ್ಲೇ
ನಯನಮನೋಹರ ನೋಟವಿನಿಮಯ.
ಸಂಬ್ರಮದ ಗದ್ದಲ, ಜನಜಂಗುಳಿ ಮಧ್ಯೆ
ಸದ್ದಿಲ್ಲದೇ ತೂರಿ ಪಕ್ಕೆ ಸೋಕಿದಾಗಲೇ
ನಾ ಬೆಚ್ಚಿದ ರಭಸಕ್ಕೆ ಕಿಲಕಿಲನೆ ನಕ್ಕವಳ,
ಎವೆಯಿಕ್ಕದೆ ನೋಡುತ್ತ ಮೈಮರೆತಿದ್ದೆ.
ಚೆಲುವೆ! ನೀನೆ ನನ್ನ ಒಲವೆಂದುಸುರಿದ್ದೆ.
ಮಲೆನಾಡಿನ ಹುಡುಗಿ, ಚಂದ ಮಾತಿನ ಮಲ್ಲಿ, ಅಂದುಕೊಂಡೆ ಮನಸಿನಲ್ಲೇ,
ಬಂಧಬೆಳೆಸಲೇ ಇವಳೊಟ್ಟಿಗೆ?
ಕಾರಂಜಿಯಾಗುವಳು ಬದುಕ ತುಂಬಾ
ಗುಲಗುಂಜಿಯಾದೀತು ಜೀವನ ಶೈಲಿ.
ಗಾಳೀಪಟದಷ್ಟು ಹಗುರ ಎದೆಭಾವ
ರೆಕ್ಕೆ ಕಟ್ಟಿ ಹಾರಿಕೊಳ್ಳುತಿವೆ ಕನಸುಗಳು
ಚಿತ್ರಕಾರನ ಕುಂಚ ಬಿಡಿಸುತ್ತಿದೆ ಚಿತ್ರಗಳ
ಮನದಂಗಳದ ತುಂಬಾ ರಂಗುರಂಗೋಲಿ
ಅವಳಂದುಗೆಯ ಹೆಜ್ಜೆಗುರುತಾಗಿಸುತ್ತಾ.