ಲಂಗುಲಘಾಮಿಲ್ಲದವನು
ಲಂಗುಲಘಾಮಿಲ್ಲದವನು


ಚೆಂಗುಲಾಬಿಯಂತಹ ಕೆನ್ನೆ ಅವಳದು
ಲಂಗುಲಘಾಮಿಲ್ಲದವ ನಿನಗೆ ತರವಲ್ಲವಿದು ತೆಗಿ..
ರಸಿಕರ ನಿದ್ದೆ ಕೆಡಿಸಿದ ಕಾವ್ಯಕುಸುಮ ಆಕೆ
ಅರಸಿಕನಾದ ನಿನಗೆಲ್ಲಿ ತಿಳಿದೀತು ಮಂಕೆ.
ಬರಿದೆ ಕನವರಿಸಬೇಡ, ವರಿಸಲಾರಳು..
ಸೃಷ್ಟಿಸಿದ ಬ್ರಹ್ಮನಿಗೆ ಮನಃಪಲ್ಲಟವಾಗಿತ್ತು
ಸುಕೋಮಲೆಯಂಗದಲಿ ಒಲವು ತುಂಬಿತ್ತು, ಕಂಗಳಲಿ ಹೊಳಪಿತ್ತು..
ಏಳು ಸುತ್ತಿನ ಮಲ್ಲೆಯ ಸುಕುಮಾರಿ,
ತಾಳತಪ್ಪುವುದು ಸಹಜವಾದರೂ,
ಕೇರಿಕೇರಿಗಲೆವ ಗೂಳಿ ನೀ ತರವಲ್ಲ..
ಕಾಲಂದಿಗೆಯ ಬಣ್ಣ, ನಡುಸಣ್ಣ, ಹೊಂಬಣ್ಣ,
ಪ್ರೀತಿ ಎದೆಯಲಿ ಮಾತು ಮೃದುಬೆಣ್ಣೆ.
ಹುಂಭ ನೀನೆಂದು ಅವಳೇನು ಬಲ್ಲಳು?
ಕೋರಿಕೆಗಳು ಇರಲಿ ಮನಸಲ್ಲೇ ಸಾಕು
ಬಿಚ್ಚಿಟ್ಟು ಹದಗೆಡಿಸಬೇಡ ಆತುರದಿ,
ಅವಳಂದಕೆ ನೀ ಹೋಲಿಕೆಯಲ್ಲ..
ಚಂದ್ರಚಕೋರಿಗೆ ಬೆಳದಿಂಗಳೆ ಬೇಕು
ನಂದನವನದ ಪಾರಿಜಾತವೇ ಬೇಕು
ಗಂಧವರಿಯದ ನಿನಗವಳು ತರವಲ್ಲ..
ದೂರದಲೆ ಸುಖಿಸು, ಆಸೆ ತೋರದೆ,
ಊರಗಲ ಉಂಟು ನಿನ್ನಾಟಗಳ ನಂಟು
ತರವಲ್ಲ ತೆಗಿ ನಿನ್ನ ಆಸೆಗಳ ಗಂಟು...