ಬೇರುಗಳು
ಬೇರುಗಳು
ಬಿಸಿಲ ಬೇಗೆ ಕಳೆಯಿಸುವ
ಹಸಿರ ಹರಡಿ ನೆರಳು ನೀಡ್ವ
ಮರಕೆ ಬೇಕು ಬೇರುಗಳು.
ಬೆಳೆದು ನಿಂತ ಮರಗಳನು
ಕೆಳಗುರುಳದೆ ಕಾಪಿಡಲು
ಬೇಕು ಮಹಾ ಬೇರುಗಳು.
ಹೊಸಚಿಗುರುಗಳರಳುತಾ
ಮರವು ಪೂತು ಫಲಿಸಲು
ಬೇಕು ಭದ್ರ ಬೇರುಗಳು.
ಸೊಂಪು ತಂಪು ಕಂಪನೀವ
ಬೆಳೆದು ನಿಂತ ಹೆಮ್ಮರಕೆ
ಬೇಕು ತಾಯಿ ಬೇರುಗಳು.
ತಾನು ಕುಡಿವ ಉದಧಿಯನು
ತನ್ನ ಕುಡಿಗೆ ಉಣಿಸಿ ಬೆಳೆಸಲು
ಬೇಕು ತ್ಯಾಗಿ ಬೇರುಗಳು.
ಓ ನವ ಪಲ್ಲವ ಲತೆಗಳೇ,
ಮರೆಯದಿರಿ ಎಂದಿಗೂ
ನಿಮ್ಮ ಆಸರೆಯ ಬೇರುಗಳನು,
ಜಗದ ಮಹಾ ಜೀವನಕೆ
ಜೀವ ವೃಕ್ಷ ವಿಕಸನಕೆ
ಬೇಕು ಪೀಳಿಗೆಯ ಬೇರುಗಳು.
ಜಗದ ಸುಗಮ ಮುನ್ನಡೆಗೆ
ಹೊಸ ಹೊಸ ಅನ್ವೇಷಣೆಗೆ
ಬೇಕು ಹಳೆಯ ತತ್ವ ಬೇರುಗಳು.