ಗಜಲ್
ಗಜಲ್
ಹೆಗಲಲಿ ನನ್ನ ಹೊತ್ತು ಹಗಲೆಲ್ಲ ಊರು ಜಾತ್ರೆ ಸುತ್ತಿದವನು ನನ್ನಪ್ಪ..
ಜಗದ ಕತೆಗಳ ಹೇಳಿ ಕಾಡಿದ ನನ್ನಾಡಿಸಿ ಮಲಗಿಸಿದವನು ನನ್ನಪ್ಪ..
ಹೆಜ್ಜೆಯನಿಡಲು ನಾ,ಹಿಗ್ಗಿ ಊರಿಗೆಲ್ಲ ಹೇಳಿಕೊಂಡು ತಿರುಗಾಡಿದವನು
ಸಜ್ಜನರಡಿಗೆ ತಲೆಬಾಗಿ ದುರ್ಜನರ ದೂರವಿಡಲು ಹೇಳಿದವನು ನನ್ನಪ್ಪ..
ಸಕಲ ಶಾಸ್ತ್ರ ಪಾರಂಗತನಾದರೂ ಒಳ ನೋವಿಗೆ ತುಸು ಕುಡಿದವನು
ಆಕಾಶದೆಲ್ಲೆಯ ಮನದವನು ಮನದೊಳಗೆ ಉಳಿದವನು ನನ್ನಪ್ಪ..
ಹೊತ್ತು ಹೊತ್ತಿಗೆ ಮುತ್ತಿಟ್ಟವನು,ತುತ್ತಿಡುವಾಗಲೆ ಎದ್ದು ಹೊರಟವನು
ಹೊತ್ತಿಗೆಯೊಳಗೆ ಗಜಲ್ನ ರಸಗವಳದ ಪದವಾಗಿ ಕಾಡಿದವನು ನನ್ನಪ್ಪ..
ನೆನಪಾಗಿ ಒಲವನೆಪವಾಗಿ ಲಕುಮಿಕಂದನ ಮನೆಮನ ಸೇರಿದವನು
ಜನಮನ ಗೆಲ್ಲೆಂದು ದೂರದಿಂದಲೇ ಎನ್ನನು ಹರಸಿದವನು ನನ್ನಪ್ಪ..
