ಹೇಳಿಬಿಡು ಗೆಳೆಯ ನಿನ್ನ ಮನದ ನೋವ
ಹೇಳಿಬಿಡು ಗೆಳೆಯ ನಿನ್ನ ಮನದ ನೋವ
ನಿನ್ನ ಮನದಲ್ಲಿ ತುಂಬಿರುವ ನೋವುಗಳ
ಹೇಳಬಾರದೇನೋ ಒಮ್ಮೆ ತುಟಿ ಬಿರಿದು
ನಗೆಯ ಮುಖವಾಡವನ್ನು ಹಾಕಿಕೊಂಡು
ಮರೆಯಲ್ಲಿ ಕೊರಗುವೆ ಏಕೆ ಉಸಿರ ಬಿಗಿಹಿಡಿದು?
ನೋಡಲಾರೆನು ನಿನ್ನನ್ನು ಇಂಥ ಸ್ಥಿತಿಯಲಿ
ಅದೇನು ಕಷ್ಟವೆಂದು ಹೇಳಬಾರದೇ ನೀನು
ಅನುದಿನವು ಜೊತೆ ಮಿಡಿಯಲು ನಿನ್ನೊಂದಿಗೆ
ಈ ಹೃದಯವಿದೆ ಎಂಬುದ ಮರೆತೆಯೇನು?
ನಿನ್ನ ಮನದ ತುಮುಲ ಆತಂಕಗಳ ತೊರೆದು
ನೀನೊಬ್ಬನೇ ಕೊರಗಿ ಕಂಬನಿ ಸುರಿಸದಿರು
ನಿನ್ನ ಭಾವವನರಿವ ಹೃದಯವೊಂದು
ಇಲ್ಲಿಹುದು ಎಂಬುದನ್ನು ನೀ ಮರೆಯದಿರು!!
ಬರಿ ಖುಷಿ ತುಂಬಿದ ನಗುವಿನಲಿ ಜೊತೆಯಾಗಿ
ನೋವಲ್ಲಿ ಸ್ಪಂದಿಸದಿರುವ ಗೆಳೆಯ ಯಾತಕೆ?
ನಿನ್ನ ಸುಖದಲ್ಲಿ ಮಾತ್ರ ನನ್ನ ಕರೆಯುವುದಾದರೆ
ಅಂಥ ಗೆಳೆತನ ಕೊಡಲು ನಾನೇ ಬೇಕೆ?
ಮನದ ದುಗುಡ ಕಳೆಯುವ ಹಾದಿ ಹಲವು
ನಿನ್ನ ಮೌನವನು ಹುಡುಕುವುದು ಹೇಗೆ?
ಮನದಿಂಗಿತವನೆಲ್ಲ ಬಿಚ್ಚಿಟ್ಟರೆ ನನ್ನಲ್ಲಿ
ನನ್ನೆದೆಯ ತೆರೆದಿಡುವೆ ನಿನ್ನೊಲವ ದನಿಗೆ!!
ಈಗಲೂ ನಿನ್ನೊಳಗಿನ ನೋವ ಬಚ್ಚಿಟ್ಟು
ನನ್ನ ಕಣ್ಣೀರಿಗೆ ಕಾರಣ ನೀನಾಗಬೇಡ
ಏಕಾಂಗಿಯಾಗಿನ್ನು ಕೊರಗಬೇಡ ನೀ
ನಿನ್ನೊಲವ ಉಸಿರಾಗಿ ನಾನಿರಲು ಜೊತೆಗೆ!!
