ಗಂಗಾಲಹರಿ
ಗಂಗಾಲಹರಿ
ಧೂರ್ಜಟಿಯ ಜಟಾಜೂಟದಿಂ
ಧರೆಗಿಳಿಯುತಿಹ ಜಾಹ್ನವಿ
ಗಿರಿಶಿಖರಗಳ ಸು ಳಿಸುಳಿದು
ಫಳಫಳನೆ ಹೊಳೆಹೊಳೆದು
ಬೀಗುತ್ತ ಬಳುಕುತ್ತ
ಒಮ್ಮೆ ಆಕ್ರೋಶದಿಂ
ಗರ್ವಗಂಗೆಯಾಗಿ
ಮತ್ತೊಮ್ಮೆ ಭೋರ್ಗರೆದು
ಭರಭರನೆ ಹರಿವ ಭಾಗೀರಥಿ
ಮಗದೊಮ್ಮೆ ಮಂದಗಮನೆ
ಮಂದ ಮಂದಾಕಿನಿ
ನಡು ನಡುವೆ ಕಣ್ಮರೆಯಾಗಿ
ಅಡಗಿ ಕುಳಿತ ಪಾತಾಳಗಂಗೆ
ಹತ್ತುಹಲವು ಹರಿಹುಗಳಿಂ
ದೇವಗಂಗಾವತರಣ
ಕೊನೆಗೊಮ್ಮೆ ನೆಲೆನಿಂತ
ಲೋಕಪಾವನೆ ತಾಯಿ
ಭುವಿಯೊಳು ಚಿರಸ್ಥಾಯಿ