ಜೋಡಿ ಹಕ್ಕಿ
ಜೋಡಿ ಹಕ್ಕಿ
ಅತ್ತಿ ಮರದ ತುತ್ತಾನ ತುದಿಗೆ(ನೆತ್ತಿ ಮ್ಯಾಗ)
ಕುಂತಾವ ಜೋಡಿ ಹಕ್ಕಿ..
ಆಡತಾವ ಹಾಡತಾವ
ಜಗದ ಕುಶಿಯನೇ ಹೆಕ್ಕಿ..
ಜೋತಬಿದ್ದ ಹೆಳಲ ಬಿಳಲು
ಗಾಳಿಗಾಡತಿತ್ತ ತೂಗಿ..
ಚೆಂದಾದ ಪ್ರೀತಿಗೆ ಹರಿಸ್ಯಾರೆಲ್ಲ
ದೇವತೆಗಳೆ ತಲೆಬಾಗಿ..
ಆಡತಾವ ಸಂಸಾರದಾಟ
ಒಲವಿಗಿಲ್ಲ ಬರಡು..
ಕನಸಿನ ಗೂಡ ಕಟ್ಟಿಕೊಂಡು
ಇಟ್ಟಾವ ತತ್ತಿ ಎರಡು..
ಗಂಡು ಹಕ್ಕಿ ರೆಕ್ಕಿಯ ಬಿಚ್ಚಿ
ಹಾರತಿತ್ತು ದೂರ..
ಹೆಣ್ಣ ಹಕ್ಕಿ ಕಾವಿಡತಿತ್ತು
ಮೊಟ್ಟೆಗೆ ದಿನವಿಡಿ ಪೂರ..
ಕಳೆಯಿತು ಮಾಸ ಬಂತು ವಸಂತ
ಚಿವ್ ಗುಡತಾವ ಮರಿಹಕ್ಕಿ
ಒಲವಿನ ಸಿರಿಗೆ ಚೆಲುವಿನ ಪರಿಗೆ
ಕುಣಿದ್ಹಾಡತಾವ ಬಿಚ್ಚಿ ರೆಕ್ಕಿ..
-✒️ಲಕುಮಿಕಂದ ಮುಕುಂದ

