ಲೇಖನಿಯೆಂಬ ರಸಿಕ
ಲೇಖನಿಯೆಂಬ ರಸಿಕ
ಲೇಖನಿಯೆಂಬ ರಸಿಕ
ಲೇಖನಿಯೆಂಬ ರಸಿಕನಿವ ಬಿಳಿಹಾಳೆ ಪ್ರೀತಿಸುವ
ಸದಾ ಮುತ್ತಿಡುವನು ಅವಳ ಎದೆಯ ಮೇಲೆ
ಹಣೆಮೇಲೆ ಬಿಂದಿಯು ತಲೆಬರಹ ಲೀಲೆ ||ಪ||
ಪೋಣಿಸಿದ ಮುತ್ತುಗಳು ದುಂಡು ಮಲ್ಲಿಗೆ ಅರಳು
ಗೆರೆಮೇಲೆ ಕೆತ್ತಿದನು ದುಂಡು ಲಿಪಿಯ
ಎಡಪಕ್ಕೆ ಮುಟ್ಟನಿವ ಮೈತುಂಬ ಉಡಿಸಿದನು
ಕೆಳಪಾದ ಮುಚ್ಚನಿವ ತೆರೆದ ವಪೆಯು.! ೧
ಕರಿಮಣಿಯು ವರ್ಣಗಳು ಚಂಬವಳ ಕೆಂಪುಮಸಿ
ಬ್ರಹ್ಮನವ ರುಜುಮಾಡಿ ಸರಿ ಎಂದನು
ಆಕೃತಿಮಾದೊಳಗಡೆಗೆ ಧ್ವನಿಮಾಗಳು ರಿಂಗಣಿಸಿ
ಎದೆಹರವಿ ಚಿಗುರಿರುವ ಆ ವಸಂತನು.! ೨
ನಡೆವಾಗ ಎಡವಿರುವ ತಪ್ಪುಗಳ ಹೊಡೆದಾಕಿ
ಹೊಮ್ಮರಳಿ ನೋಡಿದರೆ ಕಪ್ಪು ಚುಕ್ಕೆ
ಚಾರಿತ್ರ್ಯ ವಿಶೇಷತೆ ಕೆಳಗಡ್ಡ ಗೆರೆ ಎಳೆದು
ವಾಚಳಿಗೆ ತೊಡಿಸಿರುವ ಬಾಯಿ ಕುಕ್ಕೆ.! ೩
ಬಾಲರವಿ ತಲೆಬರಹ ಸುಂದರಿಯ ತುಟಿಗಳಿಗೆ
ಕೆಂಬಣ್ಣ ಸವರಿಹವು ಮುದ್ದು ಬೆರಳು
ಇತಿಹಾಸ ಕಥೆನೂರು ಬದುಕುಂಟು ಹೆಣಬಿತ್ತು
ಒಳಸಾರ ಒಳಗೊಂಡ ಕಡಲ ಹರಳು.! ೪
ಗುರುವಿಂದ ವರವಾಗಿ ಹರಿಯಾಗಿ ತೊರೆಯಾಗಿ
ಕೈಯಿಂದ ಹಾಳೆಯಲಿ ನೆಲೆಗೊಂಡಿವೆ
ಗರಿಗಳಲಿ ಶಿಲೆಗಳಲಿ ಎದೆಗಳಲಿ ಮಡುವಾಗಿ
ಜೀವಜಲ ಜೀವನದಿ ಬಲದುಂಬಿವೆ.! ೫
- ಜೀವರಾಜ ಛತ್ರದ

