ಕಂಬನಿ
ಕಂಬನಿ
ಗದರಿದರೆ ಸಾಕು
ತುಂಬಿಸಿಕೊಳ್ಳುತ್ತಿದ್ದೆ ಈ ಕಂಗಳಲಿ..
ಆದರೆ ಈಗ್ಯಾಕೆ ಮರುಭೂಮಿಯ
ಮರೀಚಿಕೆಯಂತಾದೆ ನೀ..?
ನನ್ನೇ ಪ್ರೀತಿಸುವ ನನ್ನ ಕಣ್ಣ ಹನಿಯೇ..
ನನ್ನಲ್ಲೇ ನೆಲೆಸಿರುವ ಮುದ್ದು ಕಂಬನಿಯೇ..
ಬಿಟ್ಟು ಕೊಡಲಾರೆ ನಾ ಎಲ್ಲರ ಮುಂದೆ ನಿನ್ನ
ಹಾಗೆಂದು ಮುನಿಸಿಕೊಂಡು
ತೊರೆಯದಿರು ನೀ ನನ್ನ
ಓ ಕಣ್ಣ ಸಿರಿಯೇ..
ಯಾರಿಲ್ಲದಿರೇನಂತೆ ನನಗಾಗಿ..?
ನನ್ನಲ್ಲೇ ನೀನಿರುವಾಗ..!
ಯಾರಿಗೂ ಅರ್ಥವಾಗದ ಅಂತರಂಗ
ನೀನರಿತಿರುವಾಗ...!
ಏಕಾಂತದಲ್ಲಾದರೂ ಸವರುವೆ
ನೀ ನನ್ನ ಕೆನ್ನೆಯ
ಮನದ ನೋವಿಗೆ ಸಾಂತ್ವನ ನೀ ಹೇಳುವೆ
ಹೃದಯ ಭಾರ ತಿಳಿಸದಂತೆ ನೀ ಇಳಿಸುವೆ...
ತಪ್ಪಿದ ಬದುಕಿನ
ಶ್ರುತಿಯ
ಸರಿ ದಾರಿಗೆ ತರಲು ಯತ್ನಿಸುವೆ..
ಮಾತು ನಿಂತು ನಿನ್ನದೇ
ಕಣ್ಣೀರ ಭಾಷೆಯಲಿ ನೀ
ನನಗಾಗಿ ಹಾಡುವೆ..
ಗತಿಸಿದ ಘಟನೆಯ ನೆನಪಿನ
ಕುರುಹಾಗಿರುವೆ
ಕನಸು ಕಂಗಳ ಹೊಳಪಿಗೆ
ಕಳೆ ನೀಡುವೆ
ನೋವಲ್ಲಿ ಸಾಂತ್ವನದ ಮಳೆಗರೆವೆ
ಸಂತಸದಲೂ ನಗುವಾಗಿ ಅರಳುವೆ
ನೋವ ಮರೆಮಾಚಿ ನಗುವ ನಟನೆಯ
ಪ್ರಯತ್ನಕೂ ಸಾಥಿಯಾಗಿರುವೆ
ಆದರೂ ಒಂದು ಧನ್ಯವಾದವೂ
ಹೇಳದೆ ದೂಷಿಸುವೆ ನಾ ನಿನ್ನ
ಕ್ಷಮಿಸಿ ಬಿಡು ನೀ ನನ್ನ..
ಕಣ್ಣೀರ ಧಾರೆಯೇ...
ಓ ನನ್ನೊಳಗಿನ ಕರುಣಾ ಸಾರವೇ..
ಇಂದೊಮ್ಮೆ, ಕೇವಲ ಇದೊಂದು
ಬಾರಿ ಕ್ಷಮಿಸಿ ಬಿಡು ಈ ನಿನ್ನವಳ..