ತನುವು ಮೀಟಿತು ಮತ್ತೆ ಮಧುರ ಗಾನ
ತನುವು ಮೀಟಿತು ಮತ್ತೆ ಮಧುರ ಗಾನ


ಒಂದಿರುಳ ಕನಸಿನಲು, ನನ್ನ ಬಳಿ ನೀನಿರಲು
ಹೃದಯ ಹಾಡಿತು ತಾನೇ ಹರುಷ ರಾಗ
ಮನದಾಳದಲ್ಲೆಲ್ಲ ಸಂತಸವು ಉಕ್ಕಿರಲು
ತನುವು ಮೀಟಿತು ಮತ್ತೆ ಮಧುರ ಗಾನ
ಚಿಗುರು ಚಿಗುರಲಿ ಬರೆದ ಮಾಸದಕ್ಷರದೊಲೆ
ಪ್ರಕೃತಿ ಬರೆಸಿತು ಅಲ್ಲೇ ಒಲವಿನೋಲೆ
ಮತ್ತೆ ಮರ ಮರದಲ್ಲಿ ಕೋಗಿಲೆಯ ಸವಿಗಾನ
ಕನಸ ಕನ್ಯೆಯ ಕೆನ್ನೆ ಕಂಪು ನೆನಪು
ನೆನಪು ನೆನಪಲಿ ಪ್ರೀತಿ ಹಸಿರು ಹಸಿರಾದಾಗ
ಸಂತಸದ ಚಿಲುಮೆಯೇ ಚಿಮ್ಮಿತಾಗ
ಭಾವನೆಯ ಲೋಕದಲೇ ಪ್ರೀತಿ ಪ್ರೇಮದ ಪರ್ವ
ವಾಸ್ತವವು ಮರೆಸೀತು ಅದರ ಮರ್ಮ
ನಮ್ಮ ಪ್ರೀತಿಯ ಕಂಡು ವಿಶ್ವವೇ ಬೆರಗಾಗೆ
ಇರುಳ ಕನಸಿದು ಮತ್ತೆ ಮೆಲುಕೊ ಹಾಗೆ
ವಿಶ್ವ ಮಾನವ ಪ್ರೀತಿ ಸರಳ ಸುಂದರ ಬದುಕು
ಪ್ರಕೃತಿ ಕಲಿಸುವ ಪಾಠ ಇದುವೇ ನಿಜಕೂ