ಮೊದಲ ಚೈತ್ರದ ಒಲವು
ಮೊದಲ ಚೈತ್ರದ ಒಲವು
ಚೈತ್ರದುಯ್ಯಾಲೆಯನು ಜೀಕಿ ಅರಸಿತು ಮನವು
ಚಿಗುರಿನೆಲೆಯೆಲೆಯಲ್ಲಿ ಪ್ರೇಮ ಲೀಲೆ
ಹಸಿರುಡುವ ಪ್ರಕೃತಿಯ ನೋಡಿ ದಣಿಯದು ಮನವು
ಪ್ರೇಮದಲರಿನ ಮತ್ತ ಕಂಪಿನಲ್ಲೆ
ಅಲ್ಲಿ ಮರಮರದಲ್ಲಿ ಹೂಗಳೆದೆಯೆಡೆಯಲ್ಲಿ
ಮತ್ತೆ ಬರೆಸೀತು ಆ ಪ್ರೇಮ ಕಾವ್ಯ
ಕೋಗಿಲೆಯ ಪಂಚಮವು ನಿಶೆಯನೇರಿಸುತಿರಲು
ಮಂದ ಅನಲವು ಹರಡಿ ಕಂಪು ಸೂಸೇ
ನೀರ ಜುಳುಜುಳು ರವವು ಜತೆಯ ರಾಗವ ಪಾಡೆ
ಭಾವದುಯ್ಯಾಲೆಯಲಿ ರಾಸಲೀಲೆ
ಕನಸ ಕನ್ಯೆಯ ಸನಿಹ ಮತ್ತು ಎರೆಯಿತು ನಿಶೆಯ
ನನ್ನ ಕನ್ಯೆಯ ಕೆನ್ನೆ ತಂಪು ಕಂಪು
ಹಸಿರು ಸೀರೆಯ ಒಡತಿ ಪ್ರೇಮ ಕಾವ್ಯದ ಕನ್ಯೆ
ಮನವು ಜಾರುವ ನೆಪವು ಬೇರೆ ಬೇಕೇ
ಪ್ರಕೃತಿ ಪುರುಷರ ಸ್ನೇಹ ಇಳೆಯ ನಿತ್ಯದ ನಿಯಮ
ಮೊದಲ ಚೈತ್ರದ ಒಲವಿಗೆಣೆಯು ಉಂಟೇ