ಸುರಂಗ
ಸುರಂಗ


ನೀವು ಕಂಡಿದ್ದೀರಾ
ಆ ಘಟ್ಟದಿಂದ ಆನೇ ಕಲ್ಲಿನ
ದಾರಿಯಲ್ಲಿ ಸಾಗುವಾಗ
ಸಾವಿರಾರು ವರ್ಷಗಳಿಂದ ಹಾಗೇ ಬಿದ್ದುಕೊಂಡ
ಆ ವಿಶಾಲ ಬಂಡೆ
ಸುತ್ತ ಬೆಳೆದ ಗಿಡಗಂಟೆಗಳ ಹೊದ್ದು
ಸರಿಯಾಗಿ ಪರಿಶೀಲಿಸಿ ನೋಡಿದರೆ
ಮಾತ್ರ ಕಾಣುವ
ಸುರಂಗ
ಇಗಲೂ ನನ್ನ ಮನಸ್ಸಿನಲ್ಲಿ
ಅದೇ ಆಸೆ
ಪ್ರತೀ ಸಾರಿ ಅಲ್ಲಿಂದ
ಪಾಸಾಗುವಾಗಲ್ಲೆಲ್ಲಾ
ಸಮಯ ಸಿಕ್ಕಿದಾಗ ಅದರೊಳಕ್ಕೊಮ್ಮೆ
ಹೋಗಬೇಕು
ದಿನನಿತ್ಯದ ಈ ಕಷ್ಟ ಕೋಟಲೆಗಳಿಗೆ
ಜಂಜಾಟಗಳಿಗೆ
ಮುಕ್ತಿ ಕೊಡಬಹುದಾದಂತಹ
ಖಜಾನೆ ಸಿಗಬಹುದೇನೋ ಅದರಲ್ಲಿ
ನಮ್ಮವರೆಲ್ಲರ, ಹತ್ತಿರದವರ
ಅಷ್ಟೇ ಯಾಕೆ ನಮ್ಮ
ನಿಮ್ಮೆಲ್ಲರ ಎಲ್ಲಾ ಆಸೆಗೂ
ಹಾಡಬಹುದೇ ತಿಲ್ಲಾನ
ಅಥವಾ ಅಲ್ಲೇ ಎಂದೂ ಮುಗಿಯದ
ಮಹಾ ಯಾನವೇ ತೆರೆದುಕೊಳ್ಳಬಹುದೇನೋ
ದಿಗ್ಗನೆ, ಚಕ್ರವ್ಯೂಹದ ಹಾಗೆ
ತಿರುಗಿದಷ್ಟು ತಿರುಗುತ್ತ ಅಲ್ಲಲ್ಲೇ
ವಾಪಾಸ್ಸು ಬಾರದೇ ಇರೋ ಹಾಗೇ
ಅಥವಾ ಇರಬಹುದು
ಜಂತರ್ ಮಂತರ್ ಕೂಡಾ
ನನಗೇನೂ ಹೆಚ್ಚು ಆಸೆ ಇಲ್ಲವೇ ಇಲ್ಲ ಬಿಡಿ
ನಿಮ್ಮೆಲ್ಲರಿಗಿಲ್ಲದಷ್ಟು
ನನ್ನ ನಿಮ್ಮ ಪೂರ್ವಜರೂ
ಇಂತದ್ದೇ ಆಸೆಯಲ್ಲಿ
ಕಣ್ಮುಚ್ಚಿದ್ದಿರಬಹುದು
ಅಂತ್ಯವೇನು ಹೇಳಿ ಬರತ್ತಾ
ಅಥವಾ ಬೇರೆಯೇ ಲೋಕ
ತೆರೆಯಬಹುದು, ವಿಜ್ನಾನದ
ಕಲ್ಪನೆಯ ಕಪ್ಪು, ಬಿಳಿರಂದ್ರದ ಹಾಗೇ
ತನ್ನೊಳಗೇ ಅರಗಿಸಿ, ಬಿಡೂ ಹಾಗೆ
ಇಲ್ಲಿನದೆಲ್ಲವ ಮರೆಯೋ ಹಾಗೆ
ಪುನಃ ಹೋಗಿ ನೋಡಬೇಕು ಅನ್ನಿಸಿದೆ
ಎಂದಿನಂತೆ
ಸಮಯ ಸಿಕ್ಕಾಗ
ಬರ್ತೀರಾ ನೀವೂ ಜತೆ