ಅನುಮಾನ
ಅನುಮಾನ
ಅನುಮಾನ ಇರಬೇಕು ಜೀವನದಲಿ
ಎಂದಿಗೂ ಅತಿಯಾಗದೆ ಇತಿ ಮಿತಿಯಲ್ಲಿ
ಎಲ್ಲರನ್ನೂ ನಮ್ಮವರೆಂದು ನಂಬುವ ಮುನ್ನ
ಅನುಮಾನವಿರಬೇಕು ಮೋಸ ಹೋಗದಂತೆ
ಅನುಮಾನ ಪಡಬಾರದು ಪ್ರತಿ ಸಣ್ಣ ವಿಷಯಕ್ಕೆ
ಕೂತರೂ, ನಿಂತರೂ, ಎದ್ದರೂ, ಹೋದರೂ ಎಂಬಂತೆ
ನಮ್ಮ ತಲೆಯಲಿ ಅನುಮಾನದ ಹುತ್ತ ಜಾಸ್ತಿ ಬೆಳೆದೊಡೆ
ನಮಗೇ ಅಪಾಯವು ಹುತ್ತದೊಳಗಿನ ಹಾವು ಕಡಿದಂತೆ
ಅನುಮಾನವಿರಬೇಕು ನಮಗೆ ಅಪರಿಚಿತರೊಡನೆ
ಎಂದಿಗೂ ಅನುಮಾನ ಪಡಬಾರದು ನಮ್ಮವರೊಡನೆ
ಒಮ್ಮೆ ಶಂಕೆಯ ಜ್ವಾಲೆಯು ಮನದಲಿ ಹೊಕ್ಕೀತೆಂದರೆ
ಅದು ಸುಟ್ಟು ಭಸ್ಮ ಮಾಡಿ ಬಿಡುವುದು ಸಂಬಂಧಗಳನ್ನೇ
ಆಪ್ತರೊಡನೆ ಇರಲಿ ಪ್ರತಿನಿತ್ಯ ಮುಕ್ತ ಸಮಾಲೋಚನೆ
ಸಣ್ಣ ವಿಷಯವಾದರೂ ಸರಿಯೇ ಹಂಚುವುದು ಒಳಿತು
ಮಾಹಿತಿ ವಿನಿಮಯವಿಲ್ಲದಿರೆ ಶಂಕೆಗೆ ಎಡೆಯಾದೀತು
ಸತ್ಯವನ್ನಾಡಲು ಭಯವಾದರೆ ಶಂಕೆಗೆ ಗೆಲುವಾದೀತು
ಶಂಕೆ ಬಂತೆಂದು ಮಾತನಾಡದೆ ಇರುವುದು ಒಳಿತಲ್ಲ
ಅಂತೆ ಕಂತೆಗಳ ಮಾತುಗಳ ಕೇಳಿ ವೃಥಾ ಶಂಕೆ ತರವಲ್ಲ
ಒಮ್ಮೆ ಶಂಕಿಸಿ ಸುಂದರ ಬಾಂಧವ್ಯ ಕಳೆದುಕೊಂಡರೆ
ಮತ್ತೆ ಜೋಡಿಸಿದರೂ ಬಾಂಧವ್ಯ ಮೊದಲಿನಂತಿರದು
ಒಬ್ಬರನ್ನು ಶಂಕಿಸುವ ಮುನ್ನ ನೂರು ಬಾರಿ ಯೋಚಿಸಿ
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬಂತೆ
ಸರಿಯಾಗಿ ಅರಿತೇ ಮುಂದಿನ ಹೆಜ್ಜೆಯ ನಿರ್ಧರಿಸಬೇಕು
ವೃಥಾ ಶಂಕಿಸಿ ನಿರಪರಾಧಿಗಳಿಗೆ ನೋವನ್ನೀಯಬಾರದು
