ನಮ್ಮ ಸ್ನೇಹ
ನಮ್ಮ ಸ್ನೇಹ


ಆಡುತ್ತಿದ್ದರೂ ಒಟ್ಟಿಗೆ ನಾವು ಬಾಲ್ಯದಲ್ಲಿ
ಇರಲಿಲ್ಲ ಅಷ್ಟೊಂದು ಆತ್ಮೀಯತೆ ನಮ್ಮಿಬ್ಬರಲ್ಲಿ
ಅದೆಂದೋ ಅರಿಯೆಯಾದರೂ,
ನಮ್ಮಿಬ್ಬರ ಹದಿನಾಲ್ಕರ ಹರೆಯದಲ್ಲಿ
ಭೇಟಿಯಾದೆವು ನಾವು ನಮ್ಮ ಕುಟುಂಬ ಮೂಲಸ್ಥಾನದಲ್ಲಿ
ದಾಯಾದಿಗಳು ನಾವೆಂಬ ಕಾರಣಕ್ಕೋ
ಬಾಲ್ಯದ ಸ್ನೇಹಿತೆಯರೆಂಬ ಕಾರಣಕ್ಕೋ
ಮಾತಾಡಿದೆವು ನಾವಲ್ಲಿ.
ನೀ ನನ್ನ ಹಾಗೂ ನನ್ನ ತಂಗಿಯ ಮಾತಾಡಿಸಿದೆ
ಅದೆಷ್ಟು ಬೇಗ ಕಣೇ ನಮ್ಮೊಡನೆ ಬೆರೆತು ಸ್ನೇಹಿತೆಯಾದೆ
ರಜೆಯ ಸಮಯವಾದ್ದರಿಂದ ಆವಾಗ
ನಿನ್ನ ನಮ್ಮ ಮನೆಗೆ ಕಳುಹಿಸಲು ನಿನ್ನ ತಂದೆ ನಿರ್ಧರಿಸಿದರಾಗ
ನೀ ಬಂದೆ ನಮ್ಮ ಮನೆಗೆ
ಹರಟೆ ಹೊಡೆದು ಮೋಜು ಮಾಡಿದೆವು ನಾವು ರಾತ್ರಿ ಬೆಳಿಗ್ಗೆ
ನೀ ನನ್ನ ಸಮವಯಸ್ಕಳಾದುದರಿಂದಲೋ
ನೀ ನನ್ನೊಡನೆ ಅತಿಯಾಗಿ ಬೆರೆತು ಮಾತಾಡಿದೆ
ಮಾತು ಆಡುತ್ತಾ ನಿನ್ನ ಆಗುಹೋಗುಗಳೆಲ್ಲವ ನನಗೆ ತಿಳಿಸಿದೆ
ನಾ ಅವುಗಳಿಗೆ ಪ್ರತಿಕ್ರಿಯಿಸುತ್ತಾ ನನ್ನ ವಿಚಾರಗಳ ಕೂಡ ನಿನಗೆ ತಿಳಿಸಿದೆ
ಹೀಗೆ ಹೆಚ್ಚು ಹೆಚ್ಚು ನಡೆದಾಗ ನಮ್ಮಲ್ಲಿ ಮಾತಿನ ವ್ಯವಹಾರ
ಮಾಡಲಿಲ್ಲ ನಾವು ನಮ್ಮೊಳಗೆ ನಿಗೂಢಾಚಾರ
ನೀ ನಿನ್ನ ಮನದಾಳದ ವಿಚಾರಗಳ ಸಹ ನನ್ನೊಡನೆ ಹಂಚಿಕೊಂಡೆ
ನಿನ್ನ ನಂಬಿಕೆಗೆ ಮನಸೋತು ನಾನೂ ಅಂತೆಯೇ ಮಾಡಿದೆ
ಇದ್ದರೂ ನನಗೆ ಸ್ನೇಹಿತೆಯರು ಹಲವಾರು
ಪ್ರೀತಿಸುತ್ತಿದ್ದರೂ ಅಪಾರವಾಗಿ ನನ್ನ ಅವರು
ನಿನ್ನಂತೆ ಮನದಾಳದ ವಿಷಯಗಳ
ಮುಕ್ತವಾಗಿ ಹಂಚಿಕೊಳ್ಳುತ್ತಿರಲಿಲ್ಲ ನನ್ನಲ್ಲಿ ಅವರ್ಯಾರೂ
ಅದಕ್ಕೆ ಕಣೇ ನೀ ನನ್ನ ಆತ್ಮೀಯ ಸ್ನೇಹಿತೆಯಾದೆ
ನನ್ನ ಹೃದಯದಲ್ಲಿ ಉತ್ತಮ ಸ್ನೇಹಿತೆಯ ಪಟ್ಟವನ್ನು ಪಡೆದ ಮೊದಲಿಗಳಾದೆ
ಸ್ನೇಹದಲ್ಲಿ ನಂಬಿಕೆ ಮುಖ್ಯ
ನಂಬಿದರೆ ನನ್ನ ಯಾರೂ, ಕೊಡುವೆ ನಾ ಅವರಿಗೆ ಉತ್ತಮ ಸಖ್ಯ
ಎನ್ನುತ್ತಿದ್ದ ನನಗೆ ನೀ ದೊರಕಿದೆ
ಇತ್ತೇನೋ ನಮ್ಮೀ ಸ್ನೇಹಕ್ಕೆ ಆ ದೇವರ ಆಶೀರ್ವಾದ
ಕಾಕತಾಳೀಯವಾಗಿ ನುಡಿಯುತ್ತಿದ್ದೆವು ಹಲವೊಂದು ಬಾರಿ ನಾವು ಒಟ್ಟಿಗೆಒಂದೇ ಪದ
ನಿನ್ನ ಮನದಲ್ಲಿರುವ ವಿಚಾರ ಕೆಲವೊಮ್ಮೆ ನನ್ನಿಂದಾಶ್ಚರ್ಯವಾಗಿ ಹೊರಹೊಮ್ಮುತ್ತಿತ್ತು
ಅಂತೆಯೇ ನನ್ನ ಮನದಲ್ಲಿರುವ
ವಿಚಾರವೂ ನಿನ್ನಿಂದಾಶ್ಚರ್ಯವಾಗಿ ಹೊರಹೊಮ್ಮುತ್ತಿತ್ತು
ಅದೂ ಒಂದೆರೆಡು ಬಾರಿಯಲ್ಲ
ಇದುವರೆಗೂ ನಡೆದ ನಮ್ಮ ಸ್ನೇಹದಾಶ್ಚರ್ಯ ಘಟನೆಗಳಿಗೆ ಲೆಕ್ಕವಿಲ್ಲ
ನಮ್ಮ ಬಹು ವಿಚಾರಗಳಲ್ಲಿತ್ತು ಹೋಲಿಕೆ
ಅದರಿಂದಾಗಿ ನಮ್ಮಲ್ಲಾಗಿತ್ತು ಉತ್ತಮ ಹೊಂದಾಣಿಕೆ
ಹಂಚಿಕೊಂಡೆವು ನಾವು ಒಬ್ಬರನ್ನೊಬ್ಬರು ಅಪಾರ
ಇರಲಾರದಷ್ಟು ಒಬ್ಬರನೊಬ್ಬರು ಬಿಟ್ಟು ದೂರ
ನಮ್ಮ ಸ್ನೇಹ ಇಂತೆಯೇ ಸಾಗಿತು
ನಿನ್ನ ಮನವ ನನ್ನ ಮನ ಚೆನ್ನಾಗಿ ಅರಿತಿತು.
ಇದ್ದರೂ ನಿನ್ನಲ್ಲಿ ಮುಂಗೋಪ
ನನ್ನಲ್ಲಿ ಎಂದೂ ತೋರಿಸಲಿಲ್ಲ ನೀ ಎಂದೂ ಆ ನಿನ್ನ ರೂಪ
ಪುಟ್ಟ ಕಂದಮ್ಮಗಳಿಗೆ ಅಪಾರವಾಗಿ ತೋರಿಸುತ್ತಿದ್ದೆ ನೀ ತಾಯಿಯಂತೆ ಅನುಕಂಪ
ಸ್ನೇಹದಲ್ಲಿಯೂ ಅಂತೆಯೇ ಆಗಿದ್ದೆ ನೀ ಮಾತೃ ಸ್ವರೂಪ
ಭಾವುಕ ಹೃದಯವು ನಿನ್ನದು
ಭಾವನೆಗಳಿಗೆ ಬಹುಬೇಗ ಸ್ಪಂದಿಸುವುದು
ನಿನ್ನಲ್ಲೆಷ್ಟಿತ್ತೆಂದರೆ ಕಾಳಜಿ
ಅದ ಅನುಭವಿಸಲು ಮತ್ತೆ ಮತ್ತೆ ಸಲ್ಲಿಸುವೆ ನಾ ನಿನಗರ್ಜಿ
ಎಲ್ಲರೊಡನೆ ಬೆರೆಯುವ ಸ್ನೇಹೀ ಸ್ವಭಾವವು ನಿನ್ನಯ
ಮಾಡಬಹುದು ಎಂತಹ ಅಸ್ನೇಹೀ ವ್ಯಕ್ತಿಯ ಗುಣವ ಅದೃಶ್ಯ
ಹೆಸರೇ ಸೂಚಿಸುವಂತೆ ನಿನ್ನದು ಸುಂದರ ಸ್ಮಿತ
ಆ ಸ್ಮಿತೆಯ ಮುಗ್ದತೆಯಲ್ಲಿದೆಯೇನೋ ಹಿತ
ನೀ ನನ್ನಲ್ಲಿಟ್ಟ ವಿಶ್ವಾಸ
ಮೂಡಿಸಿತು ನನ್ನಲ್ಲಿ ಪ್ರತಿಕ್ಷಣ ಮಂದಹಾಸ
ನೀ ನನಗೆ ನೀಡಿದ ಸ್ನೇಹ
ನೀಗಿಸಿತೆನ್ನ ಮನದ ಪ್ರೀತಿಯ ದಾಹ
ಉತ್ತಮ ಸ್ನೇಹಕ್ಕೆ ಮೂರ್ತಿ ನೀ
ಪ್ರೀತಿಸುವ ಕಲೆಯರಿಯದವರಿಗೆ ಸ್ಫೂರ್ತಿ ನೀ
ಜೀವನದ ಪಯಣದಲ್ಲಿ,
ಪ್ರತಿಸ್ಪರ್ಧೆಯ ಹುಚ್ಚಲ್ಲಿ
ಯಶಸ್ಸಿನ ಹುಡುಕಾಟದಲ್ಲಿ
ಸಂಸಾರದ ಜಂಜಾಟದಲ್ಲಿ
ನನ್ನ ನಿನ್ನ ಸಂಪರ್ಕ ಕಡಿಯಬಹುದು
ಆದರೆ ನನ್ನ ಮನದಾಳದಲ್ಲಿ
ನಿನ್ನ ಮೇಲಿನ ಸ್ನೇಹ, ಪ್ರೀತಿ ಎಂದೂ ಮರೆಯಾಗದು
ನಮ್ಮಿ ಸ್ನೇಹಾನುಬಂಧ
ಆಗಲಿ ಜನ್ಮಜನ್ಮದಾನುಬಂಧ
ಎಂದೂ ಇರಲಿ ಈ ನಮ್ಮ ಸ್ನೇಹ ಶಾಶ್ವತ
ಎಲ್ಲಾ ಜನುಮದಲ್ಲಿಯೂ ನಿನ್ನ ಸ್ನೇಹಿತೆಯಾಗಿ ಹುಟ್ಟಿಬರುವೆ ನಾ
ನನ್ನ ಪ್ರೀತಿಯ ಸುಶ್ಮಿತಾ