ನಾ ಹಾಡಿದ ಮೊದಲ ಗಾನ
ನಾ ಹಾಡಿದ ಮೊದಲ ಗಾನ


"ದೇವನೇ ನೀನೊಂದು ಬಾರಿ
ನನ್ನಿನಿಯನ ಮುಖವ ಕನಸಲಿ ತೋರಿಸು
ಅವನ ಕಲ್ಪನೆಯಲಿ ಮೈಮರೆತು
ಹಾಡಬೇಕೆಂದಿರುವೆ ನಾ,
ನನ್ನ ಜೀವನದ ಮೊದಲ ಹಾಡು"
ಎಂದು ಪ್ರಾರ್ಥಿಸಿದ್ದೆ ನಾ ಹಿಂದಿನ ದಿನ
ಕೇಳಲಿಲ್ಲವೇನೋ ದೇವನಿಗೆ ನನ್ನೀ ಮನದ ಮೊರೆ
ಕನಸಲ್ಲಿ ತೋರಿಸಲಿಲ್ಲ ಅವನು ನನ್ನಿನಿಯನ ಮೋರೆ
ಭಯದಿ ಬಂದೆ ನಾ ಮಾರನೇ ದಿನ
ಮೊದಲ ಹಾಡು ಹಾಡಲು ಮೈಮೇಲೆ ಮೂಡಿತ್ತು ಕಂಪನ
ಹೆಸರ ಹಿಂಪಡೆಯಲೆನೋ ಎಂದಿತ್ತು ಮನ
ಹಿಂಪಡೆಯಲಾಗದು ಹಾಡಲೇಬೇಕಿನ್ನ
ದೇವರ ಪ್ರಾರ್ಥಿಸಿದ್ದೆ ನಾ ಆ ದಿನ,
ಎಲ್ಲಿರುವ ದೇವ ನನ್ನ ಚಿನ್ನ?
ಸೇರುವುದೋ ನನ್ನೀ ಹಾಡು ಅವನ ಕರ್ಣ?
ಏನೇ ಇರಲಿ ,ಎಷ್ಟು ಪ್ರೀತಿಸುವೆ
ನಾ ನನ್ನ ಕೈಹಿಡಿಯುವವನ,
ಅಷ್ಟು ಜಯಿಸುವುದು ನನ್ನೀ ಗಾನ
ಹೆಸರ ಕರೆದಾಗ ಅಧ್ಯಾಪಕಿಯೆನ್ನ
ನೆನೆಸಿಕೊಂಡೆ ಕೈಮುಗಿದು ಆ ದೇವನ
ವೇದಿಕೆಗೆ ಬಂದೆ ನಾ
ಆದರೆ ನಾ ಹಾಡು ಹಾಡುವ ಮುನ್ನ
ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!!
ಹಾಡು ಆರಂಭಿಸಿದೆ.
ನನ್ನುಸಿರ ಸ್ವರದಿ ಸೇರಿಸಿದೆ.
ಸ್ವರವ ಒಲವಿನಲಿ ಮೀಯಿಸಿದೆ.
ತುಂಬಿ ಪ್ರೇಮವ ಎಲ್ಲೋ ಇರುವ ನನ್ನ ಗೆಳೆಯನಿಗಾಗಿ
ಹುಚ್ಚಿಯಂತೆ ಹಾಡಿದೆ
ಜನಸಮೂಹ ನನ್ನೊಲವ ಹಾಡ ಆಲಿಸಿತು
ಚಪ್ಪಾಳೆ ಸುರಿದು ಸದ್ದು ಮಾಡಿ ಸಂಭ್ರಮಿಸಿತು
ಆ ವಾತಾವರಣದಿ ನನ್ನ ಪ್ರೇಮ ವಿಜೃಂಭಿಸಿತು
ಹಾಡು ಫಲಿಸಿತು, ನನ್ನ ಪ್ರೇಮ ಜಯಿಸಿತು
ಹಾಡು ಮುಗಿಸಿ ವೇದಿಕೆಯಿಂದಿಳಿದು ಬಂದ ನನ್ನ
ಸಾರಿ ಸಾರಿ ಹೊಗಳಿದರು ಜನ
ವಾರ ಕಳೆದರೂ ಹಲವರು ಮರೆಯಲಿಲ್ಲ ನನ್ನ
ಏನೇ ಇರಲಿ, ನಾನೆಂದೂ ಮರೆಯಲಾರೆ ನಾ ಹಾಡಿದ ಮೊದಲ ಗಾನ.