ನಾಗಪಂಚಮಿ
ನಾಗಪಂಚಮಿ

ಶ್ರಾವಣಮಾಸದಲಿ ಬರೀ ಹಬ್ಬಗಳ ಸಾಲು
ಕುಚ್ಚಿದ ಕಡಬು ತುಪ್ಪದ ಜೊತೆಗೆ ಕೆನೆ ಹಾಲು
ಎಲ್ಲರೂ ಮಾಡುವರು ಚೌಲದಲ್ಲಿ ಡವುಲು
ಜೀಕಲು ಜೋಕಾಲಿ ನಿಲ್ಲುವರು ಸರತಿ ಸಾಲು
ಪಂಚಮಿ ಹಬ್ಬ ಉಳದಾವ ದಿನ ನಾಕ
ಅಣ್ಣ ಬರಲಿಲ್ಲ ಯಾಕೋ ಕರಿಲಾಕ
ಹೆಣ್ಣುಮಕ್ಕಳು ಹಾಡಿ ಅಣ್ಣನ ಕಾಯ್ತಿರ್ತಾರು
ಅಣ್ಣ ತಂಗಿಯರ ಈ ಹಬ್ಬ ಬಲು ಜೋರದಾರು
ನಾಗರ ಚೌತಿ ಕಲ್ಲುನಾಗರಕೆ ಎರೆಯುವರು ಹಾಲು
ತನಿ ಎರೆದು ನೈವೇದ್ಯ ಚಿಗಳಿ ತಂಬಿಟ್ಟುಗಳ ಸಾಲು
ಅಂದು ಮಹಿಳೆಯರಿಗೆ ಉಪವಾಸ ವಾದರೆ
ಪುರುಷರಿಗೆ ಲಡ್ಡಿಗೆ ತಂಬಿಟ್ಟುಗಳ ಉಪಚಾರ
ಪಂಚಮಿದಿನ ಹುತ್ತದ ಮಣ್ಣಿನ ನಾಗಪ್ಪನಿಗೆ
ತನಿಎರೆದು ಕುಚ್ಚಿದ ಕಡುಬಿನ ನೈವೇದ್ಯ ನೀಡಿಕೆ
ಹೆಣ್ಣುಮಕ್ಕಳಿಗೆ ಉಡುಗೊರೆಯೊಂದಿಗೆ ಕಾಣಿಕೆ
ಜೋಕಾಲಿ ಜೀಕಿ ಮಾಡುವರು ಹುಡುಗಾಟಿಕೆ
ಮಗಳು ತೌರು ಮನೆಗೆ ಬಂದರೆ ರಾಜೋಪಚಾರ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ
ಅಂದರೂ ಮಾಡುವರು ಉಡುಗೊರೆ ಉಪಚಾರ
ಹರಸುವರು ವೃದ್ಧಿಸಲಿ ಅಳಿಯ ಮಗಳ ಸಂಸಾರ