ಹೋಲಿಕೆ ಬೇಕಿಲ್ಲ
ಹೋಲಿಕೆ ಬೇಕಿಲ್ಲ
ಬಿಡುವೆಲ್ಲಿ ನಿನಗೆ
ಓ ಕಾಯಕ ಯೋಗಿನಿಯೇ
ಸೃಷ್ಟಿಯ ಮೂಲ ನೀನು
ನಮಿಪೆನು ಶಕ್ತಿಯೇ || ಪ ||
ಅಕ್ಷರ ಕಲಿಸುವೆ ತುತ್ತನು ಉಣಿಸುವೆ
ಸದ್ಗುಣಗಳನು ಗುಣಿಸುವೆ
ಸುಗಮದ ಹಾದಿಗೆ ನಡೆಸುತ ಹರಸುವೆ
ಬದುಕಿಗೆ ಜೀವವ ನೀಡುವೆ
ಅಕ್ಕ ತಂಗಿ ಅತ್ತಿಗೆ ನಾದಿನಿ
ಮಡದಿಯ ರೂಪದಿ ಕಾಣುವೆ
ತಾಯಿಯಾಗಿ ನೋವನು ನುಂಗುತ
ಮಗುವಿನ ಬಾಳನು ಬೆಳಗುವೆ
ಎಲ್ಲ ದಿಕ್ಕಿನಲೂ ದುಡಿದಿರುವೆ
ದಣಿಯುತ ತಣಿಯದೆ ಅಡಿಯಿಡುವೆ ||೧||
ವಿಜ್ಞಾನದ ಲೋಕದಿ ಜ್ಞಾನದಿ ಮಿನುಗಿಹೆ
ಗಣಿತದಿ ಅಗಣಿತಳೆನಿಸಿರುವೆ
ಸ್ಫೂರ್ತಿಯ ಧಮನಿಯೆ ಮಮತೆಯ ಖನಿಯೆ
ಗೆಲುವಿನ ಹೊಂಬೆಳಕಾಗಿರುವೆ
ಮೋಸ ವಂಚನೆ ದ್ರೋಹ ಶೋಷಣೆ
ಎಲ್ಲವ ಮೆಟ್ಟಿ ನಿಂತಿರುವೆ
ನಿನ್ನ ಗೌರವಿಸೆ ಎಲ್ಲ ದೇವತೆಗಳು
ಲೋಕವ ಹರಸುವರೆಂದಿರುವೆ || ೨||
ಬಾನಿಗೆ ಜಿಗಿದೆ ಚಂದ್ರನ ಮುಡಿದೆ
ನಿನ್ನ ಮನ ಇನ್ನೇನನು ಎಣಿಸಿದೆ
ದೇಶವ ಕಾಯುವೆ ಆರಕ್ಷಣೆ ನೀಡುವೆ
ರೋಗವ ಅಳಿಸುವೆ ರಾಗದಿ ಮಿಡಿಯುವೆ
ವಿದ್ಯಾದೇವತೆ ನೀನಾಗಿರುವೆ
ಸಂಗೀತ ಶಾರದೆ ಎನಿಸಿರುವೆ
ಚುಕ್ಕಿ ಚಂದ್ರಮ ಸೂರ್ಯರು
ನಿನ್ನ ಹಿರಿಮೆಯ ಬೆಳಗಿಹರು || ೩ ||
ನಿನಗೆ ನೀನೆ ಸಾಟಿಯಾಗಿಹೆ
ಹೋಲಿಕೆ ಬೇಕಿಲ್ಲ
ನಿನ್ನ ಗುಣಬಣ್ಣ ಬಣ್ಣಿಸಲು
ಪುಟಗಳು ಸಾಲಲ್ಲ
