ಏಕತಾರಿ
ಏಕತಾರಿ


ಕರದಿಡಿದು ಬಾರಿಸಿ ತಂಬೂರಿ
ನೀ ಎತ್ತ ಹೊಂಟಿದಿ ಸಂಚಾರಿ
ಲೋಕದುಮ್ಮಳ ಸವಿದು ಸಾಕಾಗಿ
ಹೊಂಟಿದಿ ಏಕಾಂತ ಅಲೆದಾಟ ಬೇಕಾಗಿ
ಅಂತರಾಳದ ನಾದ ಕಂಡುಕೊಂಡಿ
ಸ್ವಾನುಭವದ ಸವಿಯ ಉಂಡುಕೊಂಡಿ
ಎದೆಯನಾದಕ್ಕ ಏಕತಾರಿಯ ಹೂಡಿ
ಲೋಕಕ್ಕೆ ಹರವುತ ಹೊಂಟಾರ ಜೋಡಿ
ಮಾಯದ ಆಟಗಳ ಗೆದಿಕೊಂಡಿ
ಆದಗಾಯಗಳನೆಲ್ಲ ಮಾಯ್ಸಿಕೊಂಡಿ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಸಾರ ಸಾರುತ ಸಂತ್ಯಾಗ ನಡೆದಾನ
ಗದ್ದಲದ ನಡುವ ನಿನ್ನ ಸುದ್ದಿ
ಮದ್ದುಂಟು ಮಾತಲ್ಲಿ ಸುದ್ಧ್ಯುಂಟು ಸುರ ಸ್ವರದಲ್ಲಿ
ದುಃಖಾರ್ತನ ಕರೆದು ಸಾಂತ್ವನ ಪೇಳುವ
ನಿಜ ಸುಖ ಅರಿತವನು ನೀನು
ಚಿತ್ತದೊಳು ಚಿದೃಪನ ನೆಲೆಸಿಕೊಂಡವನು.