ತದಡಿ ಬಂದರಿನ ಸುತ್ತ ..........
ತದಡಿ ಬಂದರಿನ ಸುತ್ತ ..........
ಗೋಕರ್ಣದಿಂದ ಎರಡು ಕಿಲೋಮೀಟರ್
ದೂರದ ಸಾಣೆಕಟ್ಟೆಯ ತಿರುವಿನ
ತದಡಿ ರಸ್ತೆ ,
ಆ ರಸ್ತೆ ಇಬ್ಬರಿಗೂ ಚಿರಪರಿಚಿತ
ಕಿತ್ತುಬಿದ್ದ ಹಳ್ಳ ದಿಣ್ಣೆಗಳೂ ಸಹ
ಜೊತೆಗೂಡಿ ನಡೆಯುತ್ತಿದ್ದಾಗ
ಒಮ್ಮೊಮ್ಮೆ ಮುಗ್ಗರಿಸುವುದು ಸಹಜ !
ರಸ್ತೆಯ ಪಕ್ಕ ಆಳೆತ್ತರಕ್ಕೆ ಬೆಳೆದ
ಆ ತೆಂಗಿನ ಮರಗಳೂ
ಆಗಾಗ ನೀಗಿಸಿದ್ದವು ದಾಹ
ತೋಪಿನ ಅಂಚಿಗೆ ಕಡಲ ಕಿನಾರೆ ( ತದಡಿ ಬಂದರು )
ಉದ್ದಕ್ಕೂ ಗುಳ್ಳೆ ಗುಳ್ಳೆ ನೊರೆ
ಒಂದಕ್ಕೊಂದು ಎತ್ತರಿಸಿ ಬರುವ ತೆರೆ
ಅಲೆಗಳ ಮೇಲೆ ತೇಲಿಬರುವ ದೋಣಿ
ಕಣ್ಣಳತೆಯಲ್ಲಿ ಕಣ್ಣುಮುಚ್ಚಾಲೆ
ಸೂರ್ಯಾಸ್ತದವರೆಗೂ ಅದೇ ನಮ್ಮ ಬಯಲು
ಅದೇ ಗಾಳಿ , ಮರಳು , ಅದೇ ಅಲೆಗಳು .....
ಹೇಳು ಈಗ ನೀನೆಲ್ಲಿ .....? ನಿನ್ನ ಗಂಧವೆಲ್ಲಿ ....?
ನಮ್ಮೊಡನೆ ಜೊತೆಯಾಗಿದ್ದ ಕಾಲವೆಲ್ಲಿ ...?
ನೀರೊಳಗೆ ಕೈಚಾಚಿ ಹಿಡಿದ ಉಸುಕೆಲ್ಲಿ ...?
ಹೇಗೆ ಜಾರುತ್ತಿತ್ತು ನಿನ್ನ ಮನಸ್ಸಿನಂತೆ ...
ಒಂಟಿಯಾಗಿ ಕುಳಿತುಕೊಂಡೆ
ಆ ಹೆಬ್ಬಂಡೆ ಎದುರು
ಅದರ ಕತೆಯೇ ಬೇರೆ
ಬಂದರಿನ ಮೇಲೆ ಹಕ್ಕಿಗಳು ತಿರುಗುತ್ತಿವೆ
ಅಲೆಗಳ ಮೇಲೆ ತೇಲುವ ಹತ್ತಾರು ಬೆಸ್ತ ನೌಕೆ
ಈ ಕಡಲ ತಳದಲ್ಲಿರುವುದು
ಏನು ಗೊತ್ತೇ ...? ಮುತ್ತಲ್ಲ ....
ಮೇಲೇಳದೆ ಬಚ್ಚಿಟ್ಟುಕೊಂಡ ಒಳಗುದಿ
ಕಾಯುತ್ತಿರಬೇಕು ಅದೂ ಕಾಲಕ್ಕೆ
ತನ್ನೊಡಲೊಳಗಿರುವುದನ್ನು ತೋಡಿಕೊಳ್ಳುವುದಕ್ಕೆ .....!