ಮಾಯದ ಸಂಸಾರ
ಮಾಯದ ಸಂಸಾರ
ಮಾಯ್ಕಾರ ಮಾಡಿಟ್ಟ, ತಕ್ಕಡಿ ಸಂಸಾರ
ದುಃಖದ ಪಾಲು ಬಾಳ ಭಾರ
ಸಂಸರದೊಳಗ ಸುಖವೆಂಬೋದು ಬಲು ದೂರ ಅದರಾಳ ಕಂಡವರುಯಾರ
ಅಡಿನೆಲಕ ಬಡಿದಾಡಿ ಹಿಡಿ ಪ್ರೀತಿ ಕಡಿಮಾಡಿ
ಎಲ್ಲ ಬಿಟ್ಟೋಗುತಿದಿ ಹುಚ್ಚು ಖೋಡಿ
ತಂದದ್ದು ಏನಿಲ್ಲ ಒಯ್ಯೋದು ಏಟಿಲ್ಲ
ತಿಳುದುಕೊಳ್ಳಾಕ ಏನಾಗ್ಯಾದೊ ಧಾಡಿ
ನೆಂಬಿ ಕುಂತಿದಿ ನೆಂಬಬಾರದ್ದ ದೊಂಬಿ ದಳ್ಳುರ್ಯಾಗ ಕಾಲಕಳೆದದ್ದ
ಮದ್ದೆಲ್ಲಿ ಆದ ಅದಕ ಹುಡುಕ್ಯಾಡ
ನೀ ಸುದ್ದ ದಾರಿಯೊಳಗ ತಡಕ್ಯಾಡ
ನಿನ್ನಾತ್ಮಕ್ಕ ನಿನಗೆ ಇರಬೇಕ ಖಾತ್ರಿ ತಮ್ಮ
ಬಂದೆ ಬರ್ತಾದಂತ ನಂಬ್ಯಾರ ಉತ್ರಿ
ಸತ್ಯ ಸಮಾಧಾನ ಸದ್ಗುಣಗಳ ಬಿತ್ತರಿ
ಅಡ್ಡ ಬೆಳೆವ ಕಸಕ ಹಾಕಬೇಕು ಕತ
್ತರಿ
ತಂಗಳು ಉಣಬ್ಯಾಡ ಉಣ ಗಂಗಳ ಒಗಿಬ್ಯಾಡ
ತಮ್ಮ
ಮಂಗಳೆ ಮನಿಹೆಣ್ಣ ಬಡಿಬ್ಯಾಡ
ಹೇಳಿಕಿಮಾತಿಗಿ ಕೆಡಬ್ಯಾಡ ದುಷ್ಟರಕೂಟ ಅದುಬ್ಯಾಡ
ಸೆರೆಸಿಂದಿ ಕೈಯಾಗ ಹಿಡಿಬ್ಯಾಡ ತಮ್ಮ
ಸಜ್ಜನಸಂಗ ಬಿಡಬ್ಯಾಡ
ಯೌವನ ಎಂಬೋದು ಬಲು ಜೋರ
ತಿಳ್ಕೊಂಡು ನಡದರ ನೀ ಪಾರ
ಬಂದೋಗ ದಾರ್ಯಾಗ ಮಂದಿ ಮಕ್ಕಳೆಲ್ಲ ಋಣಇರುತನಕ ಜೊಡಿಗಿರುತಾರ
ಯಾರಿಲ್ಲ ಯಾರಿಗಿ ಕೇಡಿಗಿ ಸಾವಿಗಿ
ದೇವ್ರಂತ ದೇವ್ರುನು ಬಲುದೂರ
ನಿನ್ನ ನೀ ಮೊದಲ ತಿಳಿಬೇಕ ಜಗದಾಗ ಜ್ವಾಕಿಲೆ ಇರಬೇಕ
ಉಸುರಿರು ತನ ಬಾಳ ಬೆಲಿ ಇದಕ
ಸತ್ರ ಒಯ್ದು ಇಡುತಾರ ನಡು ಮಧ್ಯಣಕ