ಸೃಷ್ಟಿಯ ಹುಟ್ಟು, ಅವನದೇ ಗುಟ್ಟು!!
ಸೃಷ್ಟಿಯ ಹುಟ್ಟು, ಅವನದೇ ಗುಟ್ಟು!!
ಪೂಜಿಸಿದರೆ ಶ್ರೀಕೃಷ್ಣನ ಶ್ರದ್ಧೆಯನಿಟ್ಟು
ಸನ್ಮಾರ್ಗವ ತೋರುವನು ಸದ್ಭುದ್ಧಿ ಕೊಟ್ಟು
ನಾನು ನನ್ನದೆಂಬ ಅಹಂಕಾರವನು ಬಿಟ್ಟು
ನಿಷ್ಕಲ್ಮಶ ಮನದಲಿ ಭಜಿಸಬೇಕು ಭಕ್ತಿಯಿಟ್ಟು
ಮನದಿಂದ ಅರಿಷಡ್ವರ್ಗಗಳ ಜ್ವಾಲೆಯ ಸುಟ್ಟು
ಅಂತರಂಗದಿ ಸ್ನೇಹ, ಪ್ರೀತಿ, ಕರುಣೆಯ ನೆಟ್ಟು
ಎಲ್ಲರೊಳು ಒಂದಾಗಿ ಬಾಳುವ ದೀಕ್ಷೆಯ ತೊಟ್ಟು
ಪರಿಶುದ್ಧ ಮನದಿ ಕೃಷ್ಣನ ಭಜಿಸು ಹೃದಯದೊಳಿಟ್ಟು
ಅವನಿಂದಲೇ ತಾನೇ ಈ ಮನುಕುಲದ ಹುಟ್ಟು
ಭಕ್ತಿಮಾರ್ಗದಿ ಎದುರಾಗುವ ತೊಡರುಗಳ ಮೆಟ್ಟು
ಕಾಯುವನು ಅವನು ಬಾಳಿನಲಿ ಆಗದಂತೆ ಎಡವಟ್ಟು
ಅವನ ನಂಬಿದರೆ ಸಿಗುವುದು ಕೊನೆಗೆ ಪುಣ್ಯದ ಕಟ್ಟು
ಬಿಟ್ಟು ಬಿಡದೇ ನಂಬಬೇಕು ಪರಮಾತ್ಮನ ಪಣತೊಟ್ಟು
ಸೃಷ್ಟಿಯ ಸೋಜಿಗದಲ್ಲಿ ಅಡಗಿಹುದು ಅವನದೇ ಗುಟ್ಟು
ಮನುಜನಲಿ ಪರಿಪಕ್ವತೆಯಿರದು ಬಾಳಲಿ ತಿನ್ನದೆ ಪೆಟ್ಟು
ಅಚಲವಾಗಿ ನಂಬು ಕೇಶವನ ನಿನ್ನ ಚಿಂತೆಗಳ ಬದಿಗಿಟ್ಟು
